ಪ್ರತಿ ಪಕ್ಷದ್ದು ಸಾವಿನ ಶೋಕದಲ್ಲೂ ಮತ ಹೆಕ್ಕುವ ಅಮಾನವೀಯ ರಾಜಕೀಯ

ಪ್ರತಿ ಪಕ್ಷದ್ದು ಸಾವಿನ ಶೋಕದಲ್ಲೂ ಮತ ಹೆಕ್ಕುವ ಅಮಾನವೀಯ ರಾಜಕೀಯ

ಕಾರ್ಕಳ: ಪ್ರತಿಪಕ್ಷ ಬಿಜೆಪಿಯವರದ್ದು ಸಾವಿನ ಶೋಕಾಂಗಣದಲ್ಲಿ ಮತ ಹೆಕ್ಕುವ ಅಮಾನವೀಯ ರಾಜಕೀಯ. ಹಾಗಾಗಿ ಅದರ ನಾಯಕರು ಚಿನ್ನಸ್ವಾಮೀ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಉಂಟಾದ ಸಾವುನೋವುಗಳಿಗೆ ಸರಕಾರವನ್ನು ಹೊಣೆಯಾಗಿಸಿ ಸಿಎಂ, ಡಿಸಿಎಂ, ಗೃಹಸಚಿವರ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ದೂರಿದೆ.

ದೇಶದಲ್ಲಿ ಇಂತಹ ದುರಂತಗಳು ಹೊಸತೇನಲ್ಲ. ಕಳೆದ 18 ವರ್ಷಗಳಲ್ಲಿ 10ಕ್ಕೂ ಹೆಚ್ಚು ಕಾಲ್ತುಳಿತ ದುರಂತಗಳು ವಿವಿಧ ರಾಜ್ಯಗಳಲ್ಲಿ ನಡೆದಿವೆ. ಉತ್ತರಪ್ರದೇಶದ ಹತ್ರಾಸ್ ಕಾಲ್ತುಳಿತದಲ್ಲಿ 121ಜನರ ಸಾವು, ಗೋವಾದ ಶಿರಬಾಗ್ ದೇಗುಲ ಹಾಗೂ ಆಂದ್ರದ ತಿರುಪತಿಯಲ್ಲಾದ ಕಾಲ್ತುಳಿತದಲ್ಲಿ ಒಟ್ಟು 31ಕ್ಕೂ ಹೆಚ್ಚು ಭಕ್ತರ ಸಾವು, ಗುಜರಾತಿನ ತೂಗುಸೇತುವೆ ಮುರಿದು 128ಕ್ಕೂ ಹೆಚ್ಚು ಜನರ ಸಾವು ನೋವುಗಳು ಇವುಗಳಲ್ಲಿ ಅತಿ ಮುಖ್ಯವಾಗಿವೆ. 

ಇವೆಲ್ಲವು ಬಿಜೆಪಿ ಹಾಗೂ ಬಿಜೆಪಿ ಮಿತ್ರ ಪಕ್ಷದ ಆಡಳಿತವಿರುವ ರಾಜ್ಯಗಳು. ಅವರದ್ದೇ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ನಡೆದ ದುರಂತಗಳ ಬಗ್ಗೆ ಧ್ವನಿ ಎತ್ತದ ಇಲ್ಲಿನ ಬಿಜೆಪಿ ನಾಯಕರಿಗೆ ರಾಜ್ಯದ ದುರ್ಘಟನೆಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅಂದು ಬೇಡವಾದ ರಾಜೀನಾಮೆ ನಾಟಕ ಇಂದು ಕರ್ನಾಟಕದ ಪರಿಸ್ಥಿತಿಗೆ ಬೇಕಾಗಿ ಬಂದದ್ದು, ಬಿಜೆಪಿಯ ಸ್ವಹಿತಾಸಕ್ತಿಯ ರಾಜಕೀಯ ಷಡ್ಯಂತ್ರಕ್ಕೆ ಸಾಕ್ಷಿಯಾಗಿದೆ. ಇದರ ಹಿಂದೆ ಆಂತರಿಕ ಕಚ್ಚಾಟದಿಂದ ಬಳಲಿ ಬೆಂಡಾಗಿರುವ ರಾಜ್ಯ ಬಿಜೆಪಿಯ ಅಸ್ತಿತ್ವದ ಪ್ರಶ್ನೆಯೂ ಅಡಗಿದೆ ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿದೆ.

ಕಾಲ್ತುಳಿತದಂತಹ ಆಕಸ್ಮಿಕ ದುರಂತಗಳನ್ನು ಆಳುವ ಸರಕಾರಗಳ ಆಡಳಿತ ವೈಪಲ್ಯ ಎಂದು ವಿಶ್ಲೇಶಿಸಲಾಗದು. ಸರಕಾರಗಳ ಮುಖ್ಯಸ್ಥರ ರಾಜೀನಾಮೆ ಇದಕ್ಕೆ ಪರಿಹಾರವೂ ಅಲ್ಲ. ಆದರೆ ದುರಂತಗಳಿಗೆ ಕಾರಣವಾದ ಅಂಶಗಳನ್ನು ಅನ್ವೇಶಿಸಿ ತಪ್ಪಿತಸ್ಥರನ್ನು ಶಿಕ್ಷಿಸಿ ಮುಂದೆ ಇಂತಹ ಘಟನೆ ನಡೆಯದಂತೆ ನೋಡುವುದು ಸರಕಾರಗಳ ಕರ್ತವ್ಯ. ಮುಖ್ಯವಾಗಿ ಜನರ ಅಂಧ ಅಭಿಮಾನದ ಭಾವನಾತ್ಮಕ ಉನ್ಮಾಧಕತೆ ಮತ್ತು ಕಾರ್ಯಕ್ರಮ ಆಯೋಜಕರ ನಿರ್ವಹಣಾ ವೈಪಲ್ಯ ಇಂತಹ ಅನಿರೀಕ್ಷಿತ ದುರಂತಗಳಿಗೆ ಕಾರಣ ಆಗುತ್ತದೆ. ಹಾಗೆಂದು ಇಂತಹ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಖಂಡನೀಯ. ಬಿಜೆಪಿ ನಾಯಕರು ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article