
ನೀರು ತುಂಬಿದ್ದ ಹೊಂಡಕ್ಕೆ ಬಿದ್ದ ಬಾಲಕಿ
Tuesday, June 17, 2025
ಕಾಸರಗೋಡು: ಸಹಪಾಠಿಗಳ ಜೊತೆ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕಿ ಸಮೀಪದ ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಮೃತಪಟ್ಟ ದಾರುಣ ಘಟನೆ ಸೋಮವಾರ ಸಂಜೆ ಬಾಡೂರು ಸಮೀಪದ ಓಣಿಬಾಗಿಲು ಎಂಬಲ್ಲಿ ನಡೆದಿದೆ.
ಓಣಿಬಾಗಿಲು ನಿವಾಸಿ ಮುಹಮ್ಮದ್-ಖದೀಜತ್ ಕುಬ್ರಾ ದಂಪತಿ ಪುತ್ರಿ ಫಾತಿಮಾ ಹಿಬಾ ಮೃತಪಟ್ಟ ಬಾಲಕಿ. ಸೋಮವಾರ ಸಂಜೆ 5 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಸಹಪಾಠಿಗಳ ಜೊತೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಹೊಂಡಕ್ಕೆ ಬಿದ್ದು ಈ ದುರ್ಘಟನೆ ನಡೆದಿದೆ. ಜೊತೆಗಿದ್ದ ಮಕ್ಕಳ ಬೊಬ್ಬೆ ಕೇಳಿ ಮನೆಯವರು ಹಾಗೂ ಪರಿಸರ ವಾಸಿಗಳು ಮೇಲಕ್ಕೆತ್ತಿ ಕುಂಬಳೆಯ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ. ಫಾತಿಮಾ ಹಿಬಾ ಬಾಡೂರುಪದವು ಎ.ಎಲ್.ಪಿ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು.