
ಕ್ರಾಂತಿಕಾರಿ ನಾಯಕ ಚೆಗುವೆರಾ ಇಂದಿಗೂ ಅಜರಾಮರ: ಮುನೀರ್ ಕಾಟಿಪಳ್ಳ
ಮಂಗಳೂರು: ಕ್ರಾಂತಿಕಾರಿ ನಾಯಕ ಚೆಗುವೆರಾ ಇಂದಿಗೂ ಅಜರಾಮರ. ಯಾರನ್ನೂ ನಾವು ಆರಾಧನೆ ಮಾಡಲು ಹೇಳಲಾರೆವು. ಆದರೆ ಚೆಗುವೆರಾ ಅವರ ಮಾನವೀಯ ಚಿಂತನೆ, ಸಾಮ್ರಾಜ್ಯಶಾಹಿ ವಿರೋಧ ಧೋರಣೆಗಳನ್ನು ನಾವು ಮೈಗೂಡಿಸಿ ಕೆಲಸ ಮಾಡಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.
ಉದ್ಯೋಗ ಸೃಷ್ಟಿಸಿ, ನಿರುದ್ಯೋಗದಿಂದ ರಕ್ಷಿಸಿ, ಸ್ಥಳೀಯರಿಗೆ ಆದ್ಯತೆ ಒದಗಿಸಲು ಒತ್ತಾಯಿಸಿ ಡಿವೈಎಫ್ಐ ದ.ಕ. ಜಿಲ್ಲಾ ಮಟ್ಟದ ಯುವಜನರ ಸಂಘಟನಾ ಕಾರ್ಯಾಗಾರವು ಮಂಗಳೂರಿನ ಶಕ್ತಿನಗರ ಕಲಾಂಗಣ್ ಸಭಾಂಗಣದಲ್ಲಿ ಜೂನ್ 15-16ರಂದು ನಡೆದಿದ್ದು, ಇಂದು ಸಮಾರೋಪಗೊಂಡಿತು.
ಸಮಾರೋಪ ಭಾಷಣ ಮಾಡಿದ ಕಾಮ್ರೇಡ್ ಮುನೀರ್ ಕಾಟಿಪಳ್ಳ, "ಮುಸ್ಲಿಂ ಸಮುದಾಯ ಇಸ್ರೇಲ್ ಅನ್ನು ವಿರೋಧಿಸುತ್ತಿದೆ ಎಂಬದು ಬಲಪಂಥೀಯರ ಇಸ್ರೇಲ್ ಪ್ರೀತಿಗೆ ಕಾರಣ. ನಾವು ಯಾಕೆ ಇಸ್ರೇಲ್ ಅನ್ನು ವಿರೋಧ ಮಾಡಬೇಕು ಮತ್ತು ಅಮೆರಿಕದ ಧೋರಣೆಯ ವಿರೋಧ ನಿಲ್ಲಬೇಕು ಎಂಬ ಸೈದ್ಧಾಂತಿಕ ತಿಳುವಳಿಕೆ ಮುಸ್ಲಿಮರಿಗೂ ಅರಿವಿರಬೇಕು, ಭಾರತದಂತಹ ಅಭಿವೃದ್ದಿಶೀಲ ದೇಶದ ಜನಸಮೂಹಕ್ಕೂ ಅರಿವಿರಬೇಕು. ಸಾಮ್ರಾಜ್ಯಶಾಹಿ ಶಕ್ತಿಗಳ ಹುನ್ನಾರವನ್ನು ಅರಿಯದೆ ಇಸ್ರೇಲ್, ಪ್ಯಾಲೆಸ್ತೀನ್ ಸಂಘರ್ಷವನ್ನು ಧರ್ಮದ ಆಧಾರದಲ್ಲಿ ನೋಡುವುದು ಅಪಾಯಕಾರಿ ಬೆಳವಣಿಗೆ. ಕಾರ್ಪೊರೇಟ್ ಬಂಡವಾಳ ಬೆಂಬಲಿತ ಸಾಮ್ರಾಜ್ಯಶಾಹಿ ಶಕ್ತಿಗಳ ಕುರಿತು ಸರಿಯಾದ ತಿಳುವಳಿಕೆ ಯುವಜನರು ಹೊಂದಿರಬೇಕು" ಎಂದು ಹೇಳಿದರು.
"ಸೈದ್ಧಾಂತಿಕ ತಿಳುವಳಿಕೆ ಇರುವುದು ಅತಿ ಮುಖ್ಯ. ಸೈದ್ಧಾಂತಿಕ ತಿಳುವಳಿಕೆ ಇದ್ದರೆ ನಾವು ಯಾವುದೇ ಸಮಸ್ಯೆಯ ಎದುರು ಗಟ್ಟಿಯಾಗಿ ನಿಲ್ಲಲು ಸಾಧ್ಯ. ಅದಕ್ಕಾಗಿ ಅಧ್ಯಯನ ಮಾಡಬೇಕು" ಎಂದು ತಿಳಿಸಿದರು.
"ಕೋಮುವಾದದ ವಿರುದ್ಧ ಮಾತನಾಡಿದ ಮಾತ್ರಕ್ಕೆ ನಾವು ಕೋಮುವಾದವನ್ನು ಕುರುಡಾಗಿ ವಿರೋಧಿಸುತ್ತಿದ್ದೇವೆ ಎಂದಲ್ಲ. ನಾವು ದ್ವೇಷ ಹರಡುವ ಕೋಮುವಾದದ ಆಳ-ಅಗಲ ಅರ್ಥೈಸಿಕೊಳ್ಳಲು ಸಾಧ್ಯವಾಗಬೇಕು. ಸಮಾಜ ಒಡೆಯುವ ಕೋಮುವಾದದ ಅಪಾಯವನ್ನು ಅರಿತು ದೃಢವಾಗಿ ವಿರೋಧಿಸಬೇಕು, ದಮನಿತ ಸಮುದಾಯಗಳಲ್ಲಿ, ಯುವಜನರಲ್ಲಿ ಕೋಮುವಾದದ ಅಪಾಯಗಳ ಕುರಿತು ಎಚ್ಚರ ಮೂಡಿಸಬೇಕು" ಎಂದು ಹೇಳಿದರು.
"ತುಳುನಾಡಿನಲ್ಲಿ ಅದೆಷ್ಟೋ ಸಂಸ್ಥೆಗಳು, ಕಾರ್ಖಾನೆಗಳಿವೆ. ಇಲ್ಲಿನ ಸೌಕರ್ಯ ಬಳಸಿ ನೀವು ಸಂಸ್ಥೆ ಕಟ್ಟುವಾಗ, ಇಲ್ಲಿರುವ ಯುವಜನರಿಗೆ ಉದ್ಯೋಗ ನೀಡಿ ಎಂಬ ಬೇಡಿಕೆಯನ್ನು ಮುಂದಿಟ್ಟು ನಾವು ದೀರ್ಘ ಹೋರಾಟ ನಡೆಸುತ್ತಾ ಬಂದಿದ್ದೇವೆ. ತುಳುನಾಡಿನಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಉದ್ಯೋಗದಲ್ಲಿ ತುಳುನಾಡಿನ ಯುವಜನರಿಗೆ ಆದ್ಯತೆ ನೀಡಬೇಕು" ಎಂದು ಆಗ್ರಹಿಸಿದರು.
ಸಮಾರೋಪ ಸಮಾರಂಭದ ನಿರೂಪಣೆ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ನೆರವೇರಿಸಿದರು. ಜಿಲ್ಲಾ ಅಧ್ಯಕ್ಷರಾದ ಬಿ.ಕೆ. ಇಮ್ತಿಯಾಝ್ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಜಿಲ್ಲಾ ಪದಾಧಿಕಾರಿಗಳಾದ ನಿತಿನ್ ಕುತ್ತಾರ್, ಮಾಧುರಿ ಬೋಳಾರ್ ಉಪಸ್ಥಿತರಿದ್ದರು.