
ಓದಿನೊಂದಿಗೆ ಕಲಾ ಚಟುವಟಿಕೆಯಿಂದ ಯಶಸ್ಸು: ಕುದ್ರೋಳಿ ಗಣೇಶ್
ಕೊಣಾಜೆ: ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವವಾದುದು. ಓದಿನೊಂದಿಗೆ ಸಂಗೀತ, ನೃತ್ಯ, ಯಕ್ಷಗಾನದಂತಹ ಕಲಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಯಶಸ್ಸು ಬದುಕನ್ನು ನಮ್ಮದಾಗಿಸಿಕೊಳ್ಳಬಹುದು ಎಂದು ಕುದ್ರೋಳಿ ಗಣೇಶ್ ಹೇಳಿದರು.
ಅವರು ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ವತಿಯಿಂದ ಮೂರು ದಿನಗಳ ಕಾಲ ನಡೆಯಲಿರುವ ’ಸಂಭ್ರಮ 2025’ ಕಾರ್ಯಕ್ರಮವನ್ನು ಬುಧವಾರ ಮಂಗಳಾ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಜವಾಬ್ದಾರಿ ಅನ್ನೋದು ಗಟ್ಟಿಯಾಗಿ ಹೋದರೆ ಮುಂದೆ ಬಹಳ ಶ್ರೇಷ್ಠ ವಾದ ದೇಶ ಕಟ್ಟಲು ಸಾಧ್ಯ. ಎರಡನೇ ಮಹಾಯುದ್ಧದಲ್ಲಿ ಜಪಾನಿನಂತ ದೇಶ ಸರ್ವನಾಶವಾಗಿದ್ದರೂ ಸಹ ಇಂದು ಎದ್ದು ನಿಲ್ಲಲು ಕಾರಣ ಅಲ್ಲಿನ ಸರಕಾರ ಅಲ್ಲ ಅಲ್ಲಿನ ಪ್ರಜೆಗಳು. ಜಪಾನಿನಂತಹ ದೇಶ ಕಟ್ಟಲು ಅರಂಭದ ಪೀಳಿಗೆ ಎಂದರೆ ಅದು ವಿದ್ಯಾರ್ಥಿಗಳ ಸಮುದಾಯ ಅನ್ನೋದು ನಾವು ಗಮನಿಸಬೇಕು. ನಾವು ಏನೇ ಕೆಲಸ ಮಾಡಿದರೂ ನಮ್ಮ ದೇಶದ ಮೇಲಿನ ಪ್ರೀತಿ ಎಲ್ಲರಲ್ಲೂ ಇರಬೇಕು ಮತ್ತು ದೇಶಕ್ಕಾಗಿ ಕೊಡುಗೆ ನೀಡಬೇಕು ಎಂದರು.
ಮಂಗಳೂರು ವಿವಿ ಕುಲಸಚಿವ ಕೆ.ರಾಜು ಮೊಗವೀರ ಅವರು ಮಾತನಾಡಿ, ಉತ್ತಮತೆಯಿಂದ ಎತ್ತರದ ಸ್ಥಾನಕ್ಕೆ ಏರಬಹುದು. ವೃತ್ತಿಪರತೆ, ಬದ್ಧತೆ ಇದ್ದರೆ ಯಶಸ್ಸು ಸಾಧ್ಯ. ಯಾವ ಅವಕಾಶಗಳು ನಮ್ಮ ಜೀವನ ಬೆಳಗಬಹುದು ಎಂಬುದರ ಬಗ್ಗೆ ಚಿಂತನೆಯೊಂದಿಗೆ ಅವಕಾಶಗಳ ಹುಡುಕುವಿಕೆಯೊಂದಿಗೆ ಮುನ್ನಡೆದು ಉತ್ತಮ ಬದುಕು ರೂಪಿಸಿಕೊಳ್ಳಿ ಎಂದರು.
ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್.ಧರ್ಮ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿರುವ 2 ವರ್ಷಗಳಲ್ಲಿ ಕಳೆದ ಕ್ಷಣಗಳು ಬದುಕಿಗೆ ಪಾಠವಾಗಿ ಇಡೀ ಬದುಕನ್ನೇ ಸಂಭ್ರಮಿಸಬೇಕು. ವಿವಿಯಿಂದ ಉತ್ತಮ ನೆನಪುಗಳನ್ನು ಕೊಂಡೋಗಿ ಜೊತೆಗೆ ದೇಶಕ್ಕೆ ನಮ್ಮದೇ ಆದ ಕೊಡುಗೆ ನೀಡೋಣ ಎಂದರು.
ವೇದಿಕೆಯಲ್ಲಿ ವಿದ್ಯಾರ್ಥಿ ಪರಿಷತ್ ನ ಪದಾಧಿಕಾರಿಗಳಾದ ಮದನ್ ಕುಮಾರ್, ಕಾರ್ತಿಕ್ ಬಿ, ರಾಮಪ್ರಸಾದ್, ಜಿ.ಎನ್.ಪಾವನ, ಮಹೇಶ್ ಕೂರ್ಗಿ, ಮೀರಜ್ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕರಾದ ಡಾ.ಪ್ರಶಾಂತ್ ನಾಯ್ಕ್ ಅವರು ಸ್ವಾಗತಿಸಿದರು.ಉಪಾಧ್ಯಕ್ಷರಾದ ಜಿ.ಎನ್. ಪಾವನ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು.