
ಸ್ಪರ್ಧೆಯಲ್ಲಿ ಸೋಲು ಸೋಲಲ್ಲ: ಪ್ರದೀಪ್ ಬಡೆಕ್ಕಿಲ
ಕೊಣಾಜೆ: ಸ್ಪರ್ಧೆಯಲ್ಲಿ ಸೋಲು ಸೋಲಲ್ಲ. ಅದು ಮುಂದಿನ ಗೆಲುವಿಗೆ ಇರುವ ಮೆಟ್ಟಿಲು ಎಂಬ ಭಾವನೆ ಬಾರದಿದ್ದರೆ ಅದು ನಿಜವಾದ ಸೋಲು. ನಮ್ಮ ನೆಮ್ಮದಿಗಾಗಿ ಎಲ್ಲದರಲ್ಲೂ ತೊಡಗಿಸಿಕೊಳ್ಳೋಣ. ನಿರಂತರ ಕಲಿಯೋಣ. ನಿರಂತರ ಕಲಿಯೋದೇ ಜೀವನ ಎಂದು ಬಿಗ್ ಬಾಸ್ ಧ್ವನಿ ಖ್ಯಾತಿಯ ಪ್ರದೀಪ್ ಬಡೆಕ್ಕಿಲ ಹೇಳಿದರು.
ಇವರು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಮತ್ತು ವಿವಿ ವಿದ್ಯಾರ್ಥಿ ಪರಿಷತ್ತು ಆಶ್ರಯದಲ್ಲಿ ನಡೆದ ಮೂರು ದಿನಗಳ ಅಂತರ್ ವಿಭಾಗ ಸಾಂಸ್ಕೃತಿಕ ಉತ್ಸವ ’ಸಂಭ್ರಮ’ ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ವಿವಿ ಕುಲಪತಿಗಳಾದ ಪ್ರೊ.ಪಿ.ಎಲ್ ಧರ್ಮ ಇವರು ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೀರಿ. ಹೊರಗಡೆ ಅನೇಕ ಸವಾಲುಗಳಿವೆ. ಹೊಸ ಸಮಾಜ ಕಟ್ಟುವ ಕನಸು ಕಾಣುತ್ತಾ ನಿಮ್ಮ ಬದುಕನ್ನು ರೂಪಿಸಿಕೊಳ್ಳಿ ಎಂದರು.
ವಿವಿ ವಿದ್ಯಾರ್ಥಿ ಪರಿಷತ್ ನ ಅಧ್ಯಕ್ಷ ಮದನ್ ಕುಮಾರ್, ನಾಯಕರಾದ ಕಾರ್ತಿಕ್, ಜಿ.ಎನ್ ಪಾವನ, ಮಹೇಶ್ ಕೂಡಗಿ, ರಾಮ್ ಪ್ರಸಾದ್ ಮೀರಜ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಡಕ್ಕಿಲ ಪ್ರದೀಪ್ ಅವರನ್ನು ಗೌರವಿಸಲಾಯಿತು.
ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಪ್ರಶಾಂತ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿ ನಾಯಕ ಮಹೇಶ್ ಕೂಡಗಿ ಸ್ವಾಗತಿಸಿದರು. ನಿರೀಕ್ಷ ನಾಗರಾಜ್ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಮೀರಜ್ ವಂದಿಸಿದರು.