ಮೊಬೈಲ್ ಬಳಕೆಯ ಬಗ್ಗೆ ತಗಾದೆ: ಪತ್ನಿಯನ್ನೇ ಕೊಂದ ಪತಿ

ಮೊಬೈಲ್ ಬಳಕೆಯ ಬಗ್ಗೆ ತಗಾದೆ: ಪತ್ನಿಯನ್ನೇ ಕೊಂದ ಪತಿ


ಕುಂದಾಪುರ: ಪತ್ನಿಯ ವಿಪರೀತ ಮೊಬೈಲ್ ಫೋನ್ ಬಳಕೆಯಿಂದ ತೀವ್ರ ಕಿರಿಕಿರಿಗೆ ಒಳಗಾದ ಪತಿರಾಯ ಆಕೆಯನ್ನೇ ಕೊಂದುಹಾಕಿದ ದುರ್ಘಟನೆಯೊಂದು ಹೊಸಮಠ ಎಂಬಲ್ಲಿ ನಡೆದಿದೆ. 

ಪತ್ನಿ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಾಳೆಂದು ಕೋಪಗೊಂಡು ಆಕೆಯ ಗಂಡ ಗಣೇಶ್ ಪೂಜಾರಿ ಗಲಾಟೆ ಮಾಡಿ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆಗೈದು ಪರಾರಿಯಾಗಿದ್ದ. ರೇಖಾ (27) ಹತ್ಯೆಗೀಡಾದವರು. ಜೂನ್ 19 ರ ರಾತ್ರಿ ಸುಮಾರು 11.30 ರ ವೇಳೆಯಲ್ಲಿ ಈ ಕೊಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಗಣೇಶನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರ ತಾಲೂಕು ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಘಟನೆ  ನಡೆದಿದೆ.

ವೃತ್ತಿಯಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಗಣೇಶ್ ಪೂಜಾರಿ ಹಾಗೂ ರೇಖಾಳಿಗೆ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದರು. ರೇಖಾ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಗಣೇಶ್ ಮೊಬೈಲ್ ವಿಚಾರದಲ್ಲಿ ಆಗಾಗ್ಗೆ ಆಕೆಯೊಂದಿಗೆ ಗಲಾಟೆ ಮಾಡುತ್ತಿದ್ದ. ಈ ಬಗ್ಗೆ ಈ ಹಿಂದೆ ಶಂಕರನಾರಾಯಣ ಪೊಲೀಸರಿಗೆ ದೂರು ಕೂಡಾ ನೀಡಲಾಗಿದ್ದು ಅವರು ಬುದ್ದಿವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡಿದ್ದರು. ಆದರೆ ಗಣೇಶ್ ತನ್ನ ಚಾಳಿ ಮುಂದುವರೆಸಿದ್ದು ಗುರುವಾರ ತಡರಾತ್ರಿ ಮನೆಗೆ ಬಂದು ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ಮಾಡಿದ್ದ. ಪತ್ನಿಯನ್ನು ಕತ್ತಿಯಿಂದ ಕಡಿದಿದ್ದು ಗಂಭೀರ ಗಾಯಗೊಂಡ ರೇಖಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ಮನೆಯಿಂದ ಓಡಿ ಹೋಗಿದ್ದ ಆರೋಪಿ ಗಣೇಶ್ ಪೂಜಾರಿಯನ್ನು ಕುಂದಾಪುರ ವೃತ್ತನಿರೀಕ್ಷಕ ಜಯರಾಮ್ ಗೌಡ, ಶಂಕರನಾರಾಯಣ ಪೊಲೀಸ್ ಉಪನಿರೀಕ್ಷಕ ನಾಸೀರ್ ಹುಸೇನ್ ಮತ್ತು ಸಿಬ್ಬಂದಿಗಳು ಪತ್ತೆಮಾಡಿ ಬಂಧಿಸಿದ್ದು, ಪ್ರಕರಣ ದಾಖಲಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article