ಪಾಲಿಕೆ ಅಧಿಕಾರಿಗಳ ತುರ್ತು ಸಭೆ ನಡೆಸಿದ ಶಾಸಕ ಕಾಮತ್

ಪಾಲಿಕೆ ಅಧಿಕಾರಿಗಳ ತುರ್ತು ಸಭೆ ನಡೆಸಿದ ಶಾಸಕ ಕಾಮತ್


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅವರು ಪಾಲಿಕೆ ಅಧಿಕಾರಿಗಳ ಮಹತ್ವದ ತುರ್ತು ಸಭೆ ನಡೆಸಿದರು. 


ಸಭೆಯಲ್ಲಿ ಮಾತನಾಡಿದ ಶಾಸಕರು, ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದಾಗಿ ಅನೇಕ ಕಡೆ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಪ್ರತೀ ವಾರ್ಡ್ ಗೆ 10 ಮನೆಗಳಂತೆ 60 ವಾರ್ಡಿನ ಮನೆಗಳಿಗೂ ತುರ್ತು ದುರಸ್ತಿಗೆ ಸಹಾಯವಾಗುವಂತೆ 40 ಸಾವಿರದವರೆಗೆ ಪರಿಹಾರ ಧನ ನೀಡುವ ನಿರ್ಣಯ ಕೈಗೊಂಡು ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಆದರೆ ಇದೀಗ ಬಿಜೆಪಿ ಆಡಳಿತದ ಅವಧಿ ಅಂತ್ಯವಾಗಿದ್ದು, ಪಾಲಿಕೆಯು ಜಿಲ್ಲಾಡಳಿತದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿರುವ ಕಾರಣ ಪರಿಹಾರ ಧನ ಯಾರಿಗೂ ಸಿಗದಿರುವುದು ಅಕ್ಷಮ್ಯ. ಈ ಹಿಂದಿನ ಕೌನ್ಸಿಲ್ ನ ನಿರ್ಣಯವನ್ನು ತಡೆ ಹಿಡಿಯಲು ಯಾರಿಗೂ ಅಧಿಕಾರವಿಲ್ಲ. ಕೂಡಲೇ ಜನರಿಗೆ ಪರಿಹಾರ ಧನ ವಿತರಣೆಯಾಗಬೇಕು. ಅಲ್ಲದೇ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ ಪ್ರತಿಭಾವಂತ ಆಟಗಾರರಿಗೆ ಪಾಲಿಕೆಯಿಂದ ಪ್ರೋತ್ಸಾಹ ಧನ, ವಿವಿಧ ಸಂಘ ಸಂಸ್ಥೆಗಳ ಸಾಂಸ್ಕೃತಿಕ ಚಟುವಟಿಕೆಗಳಿಗೆ, ಕ್ರೀಡೆಗಳಿಗೆ ಸಹಾಯಧನವನ್ನು ನೀಡಲಾಗುತ್ತಿತ್ತು. ಅದಕ್ಕೂ ಸಹ ಕಾಂಗ್ರೆಸ್ ನಿಯಮಬಾಹಿರವಾಗಿ ತಡೆಯೊಡ್ಡಿದೆ. ಬಿಜೆಪಿಯು ಈ ಹಿಂದೆ ಬಜೆಟ್ ನಲ್ಲಿ ಮೀಸಲಿಟ್ಟ ಅನುದಾನವನ್ನು ಈಗಿನ ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಬಳಸದೇ ಜನಸಾಮಾನ್ಯರಿಗೆ ಅನ್ಯಾಯ ಎಸಗುತ್ತಿದೆ ಎಂದು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.


ಪಾಲಿಕೆಯ ಆಡಳಿತ ಯಾವಾಗ ರಾಜ್ಯ ಸರ್ಕಾರದ ಸುಪರ್ದಿಗೆ ಹೋಯಿತೋ, ಅಂದಿನಿಂದ ಆಡಳಿತ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿದೆ. ಕೂಡಲೇ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶವನ್ನು ಸರಿಪಡಿಸಬೇಕು, ಭವಿಷ್ಯದಲ್ಲಿ ಮಳೆ ನೀರು ಮನೆಗೆ ನುಗ್ಗದಂತೆ ತಡೆಗಟ್ಟಬೇಕು, ಕಸ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಶಾಸಕರು ಸೂಚನೆ ನೀಡಲಾಗಿ, ಸಕಾರಾತ್ಮಕವಾಗಿ ಸ್ಪಂದಿಸಿದ ಪಾಲಿಕೆ ಆಯುಕ್ತರು ಯಾವುದೇ ಲೋಪದೋಷವಾಗದಂತೆ ಕ್ರಮಬದ್ಧವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ  ರವಿಚಂದ್ರ ನಾಯಕ್, ಅಧೀಕ್ಷಕ ಅಭಿಯಂತರರಾದ ನರೇಶ್‌ ಶೆಣೈ, ಸುರತ್ಕಲ್ ಹಾಗೂ ಕದ್ರಿ ಭಾಗದ ಉಪ ಆಯುಕ್ತರು, ಮುಖ್ಯ ಲೆಕ್ಕಾಧಿಕಾರಿಗಳು, ಕಾರ್ಯಕಾರಿ ಅಭಿಯಂತರರುಗಳು, ಆಶ್ರಯ ವಸತಿ ರೋಜಗಾರ್‌, ಆರೋಗ್ಯ, ನಗರ ಯೋಜನೆ, ಕಂದಾಯ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article