
ಸರ್ಕಾರದ ವಿವಿಧ ಇಲಾಖೆಗಳಿಂದ ಜಾಹಿರಾತು ಬಾಬ್ತು 106 ಕೋಟಿ ರೂ.ಗೂ ಅಧಿಕ ಮೊತ್ತ ಬರಬೇಕಾಗಿದೆ: ಕಾರವಾರ ಶಾಸಕ ಸತೀಶ್ ಸೈಲ್
ಮಂಗಳೂರು: ಲೋಕೋಪಯೋಗಿ, ನಗರ ಪಾಲಿಕೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಂದ ಜಾಹಿರಾತು ಬಾಬ್ತು 106 ಕೋಟಿ ರೂ.ಗೂ ಅಧಿಕ ಮೊತ್ತ ಬರಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್(ಕೆಎಸ್‌ಎಂಸಿಎ)ನಿಗಮದ ಅಧ್ಯಕ್ಷ, ಕಾರವಾರ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ಅವರು ಶುಕ್ರವಾರ ಮಂಗಳೂರಿನ ಯೆಯ್ಯಾಡಿಯಲ್ಲಿ ಕೆಎಸ್‌ಎಂಸಿಎ ಸ್ಥಳಾಂತರಿತ ಮಂಗಳೂರು ಶಾಖೆಯ ಉದ್ಘಾಟನೆ ನೆರವೇರಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ(ಐಎನ್‌ಎಸ್) ನಿಯಮ ಪ್ರಕಾರ ಸರ್ಕಾರಿ ಜಾಹಿರಾತುಗಳನ್ನು ಪತ್ರಿಕಗಳಿಗೆ ನೀಡಿದ 60 ದಿನಗಳಲ್ಲಿ ಕೆಎಸ್‌ಎಂಸಿಎ ಬಿಲ್ ಪಾವತಿಸುತ್ತದೆ. ಆದರೆ ಕೆಎಸ್‌ಎಂಸಿಎ ಬಳಿಕ ಅದನ್ನು ಸರ್ಕಾರದಿಂದ ಪಡೆಯುವುದು ಕ್ರಮ. 2022ರಿಂದ ವಸಾಲಿಗೆ ಬಾಕಿ ಮೊತ್ತ ಇರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಇಲ್ಲಿವರೆಗೆ 106 ಕೋಟಿ ರೂ.ಗೂ ಅಧಿಕ ಮೊತ್ತ ಬರಬೇಕಾಗಿದೆ. ಮೊತ್ತ ಬಾಕಿ ಇರಿಸಿರುವ ಇಲಾಖೆಗಳಿಂದ ಪಾವತಿಗೆ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾಧಿಕಾರಿಗಳು, ಸಹಾಯಕ ಕಮಿಷನರ್‌ಗಳಿಗೆ ಪತ್ರ ಮೂಲಕ ಕೋರಲಾಗಿದೆ ಎಂದರು.
ಮಾಧ್ಯಮಗಳಿಗೆ ಸರ್ಕಾರದ ಇಲಾಖೆಗಳು ನೀಡುವ ಜಾಹಿರಾತು ಮೊತ್ತದಲ್ಲಿ ಶೇ.15ರಷ್ಟು ಕಮಿಷನ್‌ನ್ನು ಕೆಎಸ್‌ಎಂಸಿಎ ಪಡೆದುಕೊಳ್ಳುತ್ತದೆ. ಪತ್ರಿಕೆಗಳಿಗೆ ಪ್ರಯೋಜ ನವಾಗುವ ಸಲುವಾಗಿ ಈ ಕಮಿಷನ್(ಏಜೆಂಟ್ ಚಾರ್ಜ್) ಮೊತ್ತವನ್ನು ಶೇ.10ಕ್ಕೆ ಇಳಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.
ಜಾಹಿರಾತು ಮತ್ತು ಈವೆಂಟ್‌ಗಳನ್ನು ಕೆಎಸ್‌ಎಂಸಿಎ ಆಯೋಜಿಸುತ್ತಿದೆ. ಈವೆಂಟ್ ಆಯೋಜನೆಯಲ್ಲಿ ೪ಜಿ ವಿನಾಯ್ತಿಯನ್ನು 25 ಲಕ್ಷ ರೂ.ನಿಂದ 200 ಲಕ್ಷ ರೂ.ಗೆ ವಿಸ್ತರಿಸಲಾಗಿದೆ. ವಿವಿಧ ಸ್ಟಾರ್ಟ್‌ಅಪ್‌ಗಳ ವೃತ್ತಿಪರರ ಜೊತೆ ಹಾಗೂ ವಿವಿಧ ಕಂಪನಿಗಳು, ಎಂಎಸ್‌ಎಂಇ, ಬ್ಯಾಂಕ್‌ಗಳು, ಪಿಎಸ್‌ಯುಗಳು, ಗ್ರಾಹಕರೊಂದಿಗೆ ಚರ್ಚಿಸಲಾಗುತ್ತಿದೆ. ಇವುಗಳ ಜೊತೆ ಸಂಪರ್ಕ ಸೇತುವೆಯಾಗಿ ಹಾಗೂ ತಂತ್ರಜ್ಞಾನ ಫ್ಲಾಟ್‌ಫಾರಂ ಆಗಿ ಕೆಎಸ್‌ಎಂಸಿಎ ವೇದಿಕೆ ಒದಗಿಸುತ್ತದೆ ಎಂದರು.
17 ಕೋಟಿ ರೂ. ಲಾಭ:
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧೀನದಲ್ಲಿ 1972ರಲ್ಲಿ ಕೆಎಸ್‌ಎಂಸಿಎ ಅಸ್ತಿತ್ವಕ್ಕೆ ಬಂದಿದೆ. 2002ರಲ್ಲಿ ಹುಬ್ಬಳ್ಳಿಯಲ್ಲಿ ತನ್ನ ಪ್ರಥಮ ಶಾಖೆ ಆರಂಭಿಸಿದ್ದು, ಪ್ರಸ್ತುತ ರಾಜ್ಯದಲ್ಲಿ 15 ಶಾಖೆ ಹಾಗೂ ಮುಂಬೈ, ದೆಹಲಿಯಲ್ಲಿ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. 2023-24ರಲ್ಲಿ 412.12 ಕೋಟಿ ರೂ. ವಹಿವಾಟು ನಡೆಸಲಾಗಿದ್ದು, 2024-25ನೇ 431.81 ಕೋಟಿ ರೂ. ವಹಿವಾಟು ನಡೆಸಿದೆ. ಕಳೆದ ಸಾಲಿನಲ್ಲಿ 17 ಕೋಟಿ ರೂ. ಲಾಭ ಗಳಿಸಿದೆ ಎಂದರು.
ಕಳೆದ 5 ವರ್ಷಗಳಲ್ಲಿ ಸಿಎಸ್‌ಆರ್ ನಿಧಿಯಡಿ 285.37 ಲಕ್ಷ ರೂ. ವೆಚ್ಚ ಮಾಡಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಾರ್ಷಿಕ ತಲಾ 1 ಕೋಟಿ ರೂ. ದೇಣಿಗೆ ನೀಡಿದೆ. ಪ್ರಸಕ್ತ ಸಾಲಿನಲ್ಲಿ ಕಂಪನಿಯ ಲಾಭದಲ್ಲಿ 5.28 ಕೋಟಿ ರೂ.ಗಳ ಲಾಭಾಂಶವನ್ನು ಸರ್ಕಾರಕ್ಕೆ ಸಂದಾಯ ಮಾಡಲಾಗಿದೆ. ವಿಶೇಷ ಲಾಭಾಂಶ 3 ಕೋಟಿ ರೂ. ನೀಡಲು ಉದ್ದೇಶಿಸಲಾಗಿದೆ ಎಂದರು.
ಎಂಸಿಎ ಭವನ ನಿರ್ಮಾಣ:
ಸಂಸ್ಥೆಗೆ ವಿವಿಧ ಜಿಲ್ಲೆಗಳಲ್ಲಿ ಹಂಚಿಕೆ, ನೋಂದಣಿಯಾಗಿರುವ 12 ನಿವೇಶನಗಳಲ್ಲಿ ಎಂಸಿಎ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಸಂಸ್ಥೆಗೆ ಕೆಐಎಡಿಬಿಯಿಂದ ಬೆಂಗಳೂರಿನಲ್ಲಿ ಹಂಚಿಕೆಯಾಗಿರುವ 1 ಎಕರೆ ಕೈಗಾರಿಕಾ ಭೂಮಿಲ್ಲಿ ಮುದ್ರಣ ಮತ್ತು ಐಟಿ, ಐಟಿಇಎಸ್ ಚಟುವಟಿಕೆಯ ಕಾರ್ಯಯೋಜನೆ ಸಿದ್ಧ ಪಡಿಸಲಾಗುತ್ತಿದೆ ಎಂದ ಅವರು ಮಂಗಳೂರು ಶಾಖೆ 2009ರಲ್ಲಿ ಸ್ಥಾಪನೆಯಾಗಿದ್ದು, ಕಾವೂರಿನಲ್ಲಿ ಇಲ್ಲಿನ ಪ್ರಥಮ ಶಾಖೆ ಆರಂಭಿಸಲಾಗುತ್ತಿದೆ ಎಂದರು.
ಸಂಸ್ಥೆಯ ಎಂಡಿ ಮೊಹಮ್ಮದ್ ಅತಿವುಲ್ಲಾ ಶರೀಫ್, ಡಿಜಿಎಂ ನಂದೀಶ್, ಶಾಖಾ ಪ್ರಬಂಧಕ ರಾಘವೇಂದ್ರ ಶಾಸ್ತ್ರಿ, ವಿಶೇಷ ಅಧಿಕಾರಿ ಅನುರಾಧ ಇದ್ದರು.