
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ತಂಡದ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ 11 ಮಂದಿ ಬಲಿ-ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ತನವೇ ಕಾರಣ: ಶಾಸಕ ಕಾಮತ್ ಆಕ್ರೋಶ
Wednesday, June 4, 2025
ಮಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ತಂಡದ ವಿಜಯೋತ್ಸವದ ವೇಳೆ ನಡೆದ ಭೀಕರ ಕಾಲ್ತುಳಿತದಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ 11 ಮಂದಿ ಬಲಿಯಾಗಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದ ಅಮಾಯಕ ಜೀವಗಳು ಬಲಿಯಾಗಿವೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಪ್ರಕಟಣೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರೇ ವಿಜಯೋತ್ಸವ ಬೇಡ ಎಂದು ಅನುಮತಿ ನಿರಾಕರಿಸಿದ್ದರೂ, ರಾಜ್ಯ ಸರ್ಕಾರವೇ ಹಠಕ್ಕೆ ಬಿದ್ದು ಸರಿಯಾದ ಪೂರ್ವಸಿದ್ಧತೆ ಮಾಡಿಕೊಳ್ಳದೇ ಆತುರವಾಗಿ ಅಭಿನಂದನಾ ಸಮಾರಂಭ ಏರ್ಪಡಿಸಿದ್ದೇ ಈ ಅನಾಹುತಕ್ಕೆ ಕಾರಣ. ತಮ್ಮ ನೆಚ್ಚಿನ ಆಟಗಾರರನ್ನು ನೋಡಲು, ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಅತ್ಯಂತ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ ಎಂಬ ಕನಿಷ್ಠ ಪರಿಜ್ಞಾನವೂ ಸಮಾರಂಭದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ಇಡೀ ಸರ್ಕಾರಕ್ಕೆ ಇಲ್ಲದಿದ್ದಿದ್ದು ಬಹು ದೊಡ್ಡ ಬೇಜವಾಬ್ದಾರಿತನವಾಗಿದೆ. ಹಾಗಾಗಿ ಈ ದುರಂತದ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ಶಾಸಕರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.