
ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ
Saturday, June 28, 2025
ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಸತಿ ಶಾಲೆಯಲ್ಲಿ 2025-26 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಪದಗ್ರಹಣ ಮತ್ತು ಉದ್ಘಾಟನಾ ಸಮಾರಂಭವು ಜೂ.28 ರಂದು ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗೋವಾ ಸರಕಾರದ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷರು ಹಾಗೂ ತಾಂತ್ರಿಕ ಶಿಕ್ಷಣ, ನಿಟ್ಟೆ ವಿಶ್ವವಿದ್ಯಾಲಯದ ಉಪಾಧ್ಯಕ್ಷರಾದ ಪ್ರೊ. ಡಾ. ಗೋಪಾಲ್ ಮೊಗೆರಾಯ ಅವರು ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಬಳಿಕ ಮಾತನಾಡಿದ ಅವರು, ಮೊದಲನೆಯದಾಗಿ ನಾನು ಈ ಶಾಲೆಗೆ ಹಾಗೂ ಈ ಶಾಲೆಯ ಆಡಳಿತ ಮಂಡಳಿಯವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ, ಯಾಕೆಂದರೆ ಇಂತಹ ಶಿಸ್ತು ಹಾಗೂ ಹಾಗೂ ಸಂಸ್ಕಾರಭರಿತ ವಿದ್ಯಾರ್ಥಿಗಳನ್ನು ಈ ಶಾಲೆಯು ನಮ್ಮ ಸಮಾಜಕ್ಕೆ ನೀಡುತ್ತಾ ಇದೆ. ಇಲ್ಲಿನ ಶಿಸ್ತು ನೋಡಿ ನನಗೆ ತುಂಬಾ ಖುಷಿಯಾಯಿತು. ಬದುಕಲ್ಲಿ ಏನಾದ್ರೂ ಸಾಧಿಸಬೇಕಾದರೆ ಶಿಸ್ತು ಹಾಗೂ ಕಠಿಣ ಪರಿಶ್ರಮ ಅಗತ್ಯ. ಸರಕಾರವು ಸ್ಮಾರ್ಟ್ ಸಿಟಿಯನ್ನು ಮಾಡಬಹುದು, ಆದರೆ ಸ್ಮಾರ್ಟ್ ಪ್ರಜೆಗಳನ್ನು ತಯಾರಿಸೋದು ಇಂತಹ ಶಾಲೆ ಹಾಗೂ ಆಲ್ಲಿನ ಶಿಕ್ಷಕರು ಎಂದರು.
ಭಾರತವು ಅತ್ಯಂತ ಸಂಸ್ಕಾರಭರಿತವಾಗಿದೆ, ಆಂಗ್ಲ ಭಾಷೆಯಲ್ಲಿ ಪಾಪ ಎನ್ನುವ ಪದಕ್ಕೆ ಅರ್ಥವಿದ್ದರೆ ಪುಣ್ಯ ಎಂಬ ಪದಕ್ಕೆ ಸರಿಯಾದ ಅರ್ಥವನ್ನು ಆಂಗ್ಲ ಭಾಷೆ ಕೊಡುವುದಿಲ್ಲ. ಆದರೆ ನಮ್ಮ ಭಾರತದಲ್ಲಿ ಪುಣ್ಯ ಎಂಬ ಪದಕ್ಕೆ ತುಂಬಾ ಮಹತ್ವವಿದೆ. ಹಾಗಾಗಿ ನಾವು ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ಒಲವು ತೋರಿಸದೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಮಕ್ಕಳಿಗೆ ಹಿತನುಡಿದರು. ಒಬ್ಬ ನಾಯಕನಾದವನು ಯಾರನ್ನೋ ಮೆಚ್ಚಿಸುವುದಕ್ಕೋಸ್ಕರ ಏನೇನೋ ಮಾಡಬಾರದು, ಆತ ಪ್ರಾಮಾಣಿಕವಾಗಿ ತನ್ನ ಕಾರ್ಯದಲ್ಲಿ ಶಿಸ್ತು ಹಾಗೂ ಪಾರದರ್ಶಕತೆಯನ್ನು ಕಾಪಾಡಬೇಕು. ಹಾಗಿದ್ದಾಗ ಮಾತ್ರ ಅವನು ನಿಜವಾದ ನಾಯಕನಾಗಲು ಸಾಧ್ಯ ಹಾಗೂ ಇನ್ನೊಬ್ಬರಿಂದ ಪ್ರಶಂಸೆ ಹಾಗೂ ಗೌರವವನ್ನು ಪಡೆಯಲು ಸಾಧ್ಯ ಎಂದರು.
ಬಳಿಕ ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಸೇರಿ ಅತಿಥಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಮತ್ತು ವಿವಿಧ ವಿಭಾಗಗಳಾದ ಅಗ್ನಿ, ವಾಯು, ಜಲ, ಪೃಥ್ವಿ ನಾಮಾಂಕಿತ ದಳಗಳ ಧ್ವಜವನ್ನು ವಿತರಿಸುವ ಮೂಲಕ ನಾಯಕರ ಪದಗ್ರಹಣವು ನಡೆಯಿತು.
ಗಣ್ಯರೆಲ್ಲರು ಸೇರಿ ನೂತನವಾಗಿ ನೇಮಕಗೊಂಡ ವಿಧ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಬಾಡ್ಜ್ ನೀಡಿದರು. ಬಳಿಕ ವಿಧ್ಯಾರ್ಥಿ ಸಂಘದ ನಾಯಕ ತಮೀಮ್ ರೂಮಿ, ನಾಯಕಿ ಸಾನ್ವಿ ಕಿಶೋರ್ ಹಾಗೂ ಇನ್ನಿತರ ಪದಾಧಿಕಾರಿಗಳೆಲ್ಲರು ಪ್ರಮಾಣವಚನವನ್ನು ಸ್ವೀಕರಿಸಿದರು.
ಶಕ್ತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಅವರು ಈ ಪ್ರಮಾಣವಚನ ನೆರವೇರಿಸಿದರು. ನಂತರ ವಿದ್ಯಾರ್ಥಿ ಸಂಘದ ನಾಯಕ ತಮೀಮ್ ರೂಮಿ ಹಾಗೂ ನಾಯಕಿ ಸಾನ್ವಿ ಕಿಶೋರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ನಂತರ ಶಾಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಐಕ್ಯತಾ ಗೀತೆಯನ್ನು ಹಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ಕೆ.ಸಿ. ನಾಕ್ ಅವರು ನೂತನವಾಗಿ ನೇಮಕಗೊಂಡಿರುವ ವಿಧ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಶುಭವನ್ನು ಹಾರೈಸಿದರು.
ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ್ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಮತ್ತಿತರರು ಉಪಸ್ಥಿತರಿದ್ದರು.
ಆನೆಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ಮಿಶಾ ಸ್ವಾಗತಿಸಿದರು.