
ದಿನದ 24 ತಾಸು ನೀರು-ಅಧಿಕಾರಿಗಳು ಕಾರ್ಯನಿರ್ವಹಿಸಬೇಕು: ಡಾ. ಆನಂದ್
ಮಂಗಳೂರು: ಮಳೆಗಾಲದ ಈ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ 24x7 ನೀರು ಸರಬರಾಜು ಈ ಸಮಯದ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ದ.ಕ. ಜಿಪಂ ಸಿಇಒ ಡಾ. ಆನಂದ್ ಹೇಳಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಕುರಿತಂತೆ ಅನುಷ್ಟಾನ ಅಧಿಕಾರಿಗಳಿಗೆ ಆಯೋಜಿಸಲಾದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೀರಿನ ಲಭ್ಯತೆ, ವ್ಯವಸ್ಥೆ ಹಾಗೂ ಬಳಕೆದಾರರಿಗೆ ವಿಧಿಸಲಾಗುವ ದರ ಹಾಗೂ ನಿರ್ವಹಣೆಯ ಜವಾಬ್ಧಾರಿಯನ್ನು ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರು ಮತ್ತು ನೈರ್ಮಲ್ಯ ಸಮಿತಿಯಿಂದಲೇ ನಿರ್ವಹಿಸಲು ನಿರ್ಧರಿಸಲಾಗಿದೆ. ಗ್ರಾಮೀಣ ಭಾಗದಲ್ಲಿಯೂ ನೀರು ಪೂರೈಕೆ ವ್ಯವಸ್ಥೆಯನ್ನು ಗ್ರಾಮ ಪಂಚಾಯತ್ ಮೂಲಕ ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ.
ಇದೀಗ ಜಲಜೀವನ್ ಮಿಶನ್ನಡಿ ಪ್ರತಿ ಮನೆಗಳಿಗೂ ನೀರಿನ ಸಂಪರ್ಕ ಒದಗಿಸಿ 24x7 ನೀರು ಒದಗಿಸುವ ಕಾರ್ಯ ನಡೆಸಲಾಗುತ್ತಿದೆ. ಈ ವ್ಯವಸ್ಥೆಯಡಿ ಪಂಚಾಯತ್ ಮಟ್ಟದಲ್ಲಿಯೇ ನೀರಿನ ಗುಣಮಟ್ಟವನ್ನು ಖಾತರಿಪಡಿಸಲು ಪ್ರಯೋಗಾಲಯ ಮೂಲಕ ತಪಾಸಣೆ ವ್ಯವಸ್ಥೆಯನ್ನೂ ಮಾಡಲಾಗಿದೆ. ನಿತ್ಯ ನೀರು ಪೂರೈಕೆಗೆ ಆದ್ಯತೆ ನೀಡುವ ಜತೆಗೆ ಮೆಸ್ಕಾಂ ಆಸ್ತಿಗಳಿಗೆ ನಷ್ಟ ಆದಾಗ ದಂಡ ವಿಧಿಸುವಂತೆ, ಮೀಟರ್ ವ್ಯವಸ್ಥೆ ಸೇರಿದಂತೆ ನೀರಿನ ಸೌಕರ್ಯಗಳಿಗೂ ಹಾನಿ ಆದಾಗ ದಂಡ ವಿಧಿಸುವ ಅವಕಾಶ ಗ್ರಾಮ ಪಂಚಾಯತ್ಗೆ ಇದೆ. ಈ ನಿಟ್ಟಿನಲ್ಲಿ ಮೊದಲು ವ್ಯವಸ್ಥೆಯನ್ನು ಸುಸ್ಥಿರಗೊಳಿಸಿ, ಮಾಹಿತಿ ಹಾಗೂ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಯೋಜನೆಯ ಉದ್ದೇಶ ಕೇವಲ ನೀರು ಪೂರೈಕೆಯ ಮೂಲಭೂತ ಸೌಕರ್ಯಗಳನ್ನು ಮನೆಗಳಿಗೆ ಒದಗಿಸುವುದಲ್ಲ. ಬದಲಾಗಿ ವ್ಯವಸ್ಥೆಯು ಪ್ರತಿ ಮನೆಗಳಲ್ಲೂ ಕಾರ್ಯಗತವಾಗುವುದನ್ನು ಖಾತರಿ ಪಡಿಸುವುದಾಗಿದೆ. ನೀರು ಪೂರೈಕೆಗೆ ಸಂಬಂಧಿಸಿ ಒಂದು ಗ್ರಾಮದಿಂದ ಇನ್ನೊಂದು ಗ್ರಾಮದ ಸಮಸ್ಯೆ ಭಿನ್ನವಾಗಿದ್ದು, ಆ ಸಮಸ್ಯೆಗಳನ್ನು ಅರಿತುಕೊಂಡು ಎಲ್ಲಾ ಗ್ರಾಮಗಳಿಗೂ ಸಮಾನವಾಗಿ ನೀರು ಪೂರೈಕೆಯಾಗುವ ನಿಟ್ಟಿನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದವರು ಹೇಳಿದರು.
ಉಡುಪಿ ಜಿಲ್ಲಾ ಪಂಚಾಯತ್ನ ಸಿಇಒ ಪ್ರತೀಕ್ ಬಾಯಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿಯೂ ಮನೆಗಳಿಗೆ ನೀರು ಪೂರೈಕೆ, ನಿರ್ವಹಣೆ ಹಾಗೂ ಆದಾಯದ ವ್ಯವಸ್ಥೆಯ ಬಗ್ಗೆ ಚರ್ಚಿಸುವ ಸಲುವಾಗಿ ಇಒ ಹಾಗೂ ಪಿಡಿಒಗಳನ್ನು ಒಳಗೊಂಡು ಗ್ರಾಮೀಣ ಭಾಗದಲ್ಲಿ ನೀರು ಪೂರೈಕೆಯ ಅಧಿಕಾರಿಗಳಿಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ವ ಬ್ಯಾಂಕ್ನ ದಕ್ಷಿಣ ಏಷ್ಯಾ ಪ್ರಾಕ್ಟೀಸ್ ಮ್ಯಾನೇಜರ್ ಸುಮಿಲಾ ಗುಲ್ಯಾನಿ ಮಾತನಾಡಿ, ವಿಶ್ವಬ್ಯಾಂಕ್ ನೆರವಿನಲ್ಲಿ ರಾಜ್ಯದಲ್ಲಿ ಸುಮಾರು 10000 ಕೋಟಿ ರೂ.ಗಳ ನೀರು ಪೂರೈಕೆ ಯೋಜನೆಗಳು ನಡೆಯುತ್ತಿದ್ದು, ಅದರಲ್ಲಿ 3000 ಕೋಟಿರೂ.ಗಳ ಜಲಜೀವನ್ ಮಿಶನ್ ಯೋಜನೆಯೂ ಒಳಗೊಂಡಿದೆ ಎಂದು ಅವರು ಹೇಳಿದರು.
ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗಳಿಗೂ ಕುಡಿಯುವ ನೀರನ್ನು ವ್ಯವಸ್ಥಿತವಾಗಿ ಒದಗಿಸುವ ಯೋಜನೆ ಕರ್ನಾಟಕದಲ್ಲಿ ಕಾರ್ಯಗತವಾಗಲಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ನೀರು ಮತ್ತು ನೈರ್ಮಲ್ಯ ತಜ್ಞೆ ಅರೋಹ ಬಹುಗುಣ, ಕ್ರಿಯಾ ತಂಡದ ನಾಯಕರಾದ ಮರಿಯಪ್ಪ ಕುಲ್ಲಪ್ಪ, ಕ್ರಿಸ್ಟೋಫರ್ ವೆಲ್ಸನ್, ಉಡುಪಿಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ದ.ಕ. ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎನ್.ಡಿ. ರಘುನಾಥ ಸ್ವಾಗತಿಸಿದರು. ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ (ಆಡಳಿತ) ಉಪ ಕಾರ್ಯದರ್ಶಿ ಜಾಫರ್ ಶರೀಫ್ ಸುತಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.