
ತಂದೆ ಬಿಸಾಡಿದ್ದ ಬೀಡಿ ತುಂಡು ನುಂಗಿ ಮಗು ಸಾವು
Tuesday, June 17, 2025
ಮಂಗಳೂರು: ಅರ್ಧ ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡಿದ್ದ ಹತ್ತು ತಿಂಗಳ ಮಗವೊಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಡ್ಯಾರ್‌ನಲ್ಲಿ ವಾಸವಾಗಿದ್ದ ಬಿಹಾರ ಮೂಲದ ದಂಪತಿಯ 10 ತಿಂಗಳ ಮಗು ಅನೀಶ್ ಕುಮಾರ್ ಮೃತ ಪಟ್ಟಿದೆ.
ಜೂ.14ರ ಮಧ್ಯಾಹ್ನ ಸುಮಾರು 1.30ಕ್ಕೆ ಅರ್ಧ ಸೇದಿ ಬಿಸಾಡಿದ್ದ ಬೀಡಿ ತುಂಡನ್ನು ಮಗು ನುಂಗಿ ಅಸ್ವಸ್ಥಗೊಂಡಿತ್ತು. ಅಪರಾಹ್ನ 3.30ಕ್ಕೆ ಮಗುವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ರವಿವಾರ ಬೆಳಗ್ಗೆ 10.25ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ತನ್ನ ಗಂಡನ ನಿರ್ಲಕ್ಷ್ಯದಿಂದಲೇ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡು ಮಗು ಮೃತಪಟ್ಟಿದೆ. ಮನೆಯೊಳಗೆ ಬೀಡಿ ಸೇದಿ ಬಿಸಾಡದಂತೆ ಗಂಡನಿಗೆ ಹಲವು ಬಾರಿ ಎಚ್ಚರಿಸಿದ್ದರೂ ಮತ್ತೆ ಎಸೆದ ಪರಿಣಾಮ ಮಗು ಪ್ರಾಣ ಕಳೆದುಕೊಂಡಿದೆ ಎಂದು ಮಗುವಿನ ತಾಯಿ ಲಕ್ಷ್ಮಿ ದೇವಿ ದೂರು ನೀಡಿದ್ದಾರೆ.