ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯಕ್ಕೆ ಭೂಮಿ ಮಂಜೂರು ಬಗ್ಗೆ ಕಂದಾಯ ಸಚಿವರೊಂದಿಗೆ ಸಮಾಲೋಚನಾ ಸಭೆ

ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯಕ್ಕೆ ಭೂಮಿ ಮಂಜೂರು ಬಗ್ಗೆ ಕಂದಾಯ ಸಚಿವರೊಂದಿಗೆ ಸಮಾಲೋಚನಾ ಸಭೆ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದವರಿಗೆ ಕೃಷಿಯೋಗ್ಯ ಭೂಮಿಯನ್ನು ಮಂಜೂರು ಮಾಡುವ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಕೊರಗ ಸಮುದಾಯದ ಪ್ರತಿನಿಧಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಲಾಯಿತು.

ಜೂ.27 ರಂದು ಜಾಗೃತ ಕರ್ನಾಟಕದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದ ಪ್ರತಿನಿಧಿಗಳು ಮತ್ತು ತುಮಕೂರಿನ ಅಲೆಮಾರಿ ಸಮುದಾಯದ ಪ್ರತಿನಿಧಿಗಳ ನಿಯೋಗದೊಂದಿಗೆ ಸಚಿವ ಕೃಷ್ಣಬೈರೇಗೌಡರೊಂದಿಗೆ ಸಭೆ ಏರ್ಪಡಿಸಲಾಗಿತ್ತು.


ಕೊರಗ ಸಮುದಾಯದವರಿಗೆ ನೀಡಲೆಂದು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗುರುತಿಸಿರುವ ಕೃಷಿ ಯೋಗ್ಯ ಭೂಮಿಯನ್ನು ಶೀಘ್ರವಾಗಿ ಮಂಜೂರು ಮಾಡುವಂತೆ ಕೊರಗ ಸಂಘದ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರ ಮುಂದೆ ತಮ್ಮ ಅಹವಾಲನ್ನು ಸಲ್ಲಿಸಿದರು.

ಉಡುಪಿ ಜಿಲ್ಲೆಯಲ್ಲಿ ಕೊರಗ ಸಮುದಾಯದವರಿಗೆ ಕೃಷಿ ಭೂಮಿಯ ಹಂಚಿಕೆ ಉತ್ತಮ ರೀತಿಯಲ್ಲಿ ನಡೆದಿದ್ದು, ಅದೇ ಮಾದರಿಯನ್ನು ದಕ್ಷಿಣ ಕನ್ನಡದಲ್ಲೂ ಅನುಸರಿಸುವಂತೆ ಕೊರಗ ಸಂಘದ ಪ್ರತಿನಿಧಿಗಳು ಸಚಿವರಲ್ಲಿ ಮನವಿ ಮಾಡಿದರು.

ಸಮುದಾಯದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಈ ಹಿಂದೆ ಕೊರಗ ಸಮುದಾಯಕ್ಕೆ ಕೃಷಿ ಭೂಮಿ ಮಂಜೂರು ಮಾಡಿದ ಪ್ರಕ್ರಿಯೆಗಳನ್ನು ಜಿಲ್ಲಾಡಳಿತದೊಂದಿಗೆ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅತೀ ಸೂಕ್ಷ್ಮ ಹಾಗೂ ಅತೀ ಹಿಂದುಳಿದಿರುವ ಪರಿಶಿಷ್ಟ ಪಂಗಡದ ಸಮುದಾಯವಾಗಿರುವ ಕೊರಗರು ಗುಂಪು ಗುಂಪಾಗಿ ವಾಸಿಸುವ ಹಿನ್ನೆಲೆಯವರಾಗಿದ್ದು, ಕನಿಷ್ಠ 10 ರಿಂದ 15 ಕುಟುಂಬಗಳಿಗೆ ಒಟ್ಟೊಟ್ಟಿಗೆಯಾಗಿ ಭೂಮಿ ಮಂಜೂರು ಮಾಡಿದರೆ ತಮ್ಮ ಹಿಂದಿನ ಸಮುದಾಯ ಪರಿಕಲ್ಪನೆಯಂತೆ ಕೊರಗರು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ದ.ಕ. ಜಿಲ್ಲಾ ಕೊರಗ ಸಂಘದ ಅಧ್ಯಕ್ಷ ಸುಂದರ ಬೆಳವಾಯಿ ಅವರು ಸಭೆಯಲ್ಲಿ ಮನವಿ ಮಾಡಿದರು.

ಕಾನೂನು ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ಪ್ರಾಮಾಣಿಕವಾಗಿ ನಡೆಸುವುದಾಗಿ ಸಚಿವ ಕೃಷ್ಣ ಬೈರೇಗೌಡ ನಿಯೋಗಕ್ಕೆ ಭರವಸೆ ನೀಡಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಕೊರಗ ಸಮುದಾಯದ ಹಿನ್ನೆಲೆ ಹಾಗೂ ಪ್ರಸ್ತುತ ಕೊರಗ ಸಮುದಾಯದ ಸ್ಥಿತಿಗತಿಯ ಬಗ್ಗೆ ಸಭೆಗೆ ವಿವರ ನೀಡಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ದ.ಕ ಜಿಲ್ಲಾ ಕೊರಗರ ಸಂಘದ ಅಧ್ಯಕ್ಷ ಸುಂದರ ಬೆಳುವಾಯಿ, ಉಪಾಧ್ಯಕ್ಷ ಕೊಗ್ಗ ರಮೇಶ್, ಪ್ರಧಾನ ಕಾರ್ಯದರ್ಶಿ ಶಶಿಕಲಾ, ಪದಾಧಿಕಾರಿಗಳಾದ ಸಂಜೀವ ಕೊಡಿಕಲ್, ಕಮಲ ಮೊಂಟೆಪದವು, ಜಾಗೃತ ಕರ್ನಾಟಕದ ರಾಜ್ಯ ಸಮಿತಿ ಸದಸ್ಯರಾದ ಬಿ.ಸಿ ಬಸವರಾಜ್, ಲಕ್ಷ್ಮಣ್ ಕುಂದರ್, ಡಾ. ವಾಸು ಎಚ್.ವಿ, ದೊಡ್ಡಿಪಾಳ್ಯ ನರಸಿಂಹಮೂರ್ತಿ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article