
ಹಿಂದಿನ ಪೊಲೀಸ್ ಆಯುಕ್ತ, ಎಸ್ಪಿ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಯು.ಟಿ. ಖಾದರ್ ಒತ್ತಾಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಹಿಂದೆ ಇದ್ದ ಪೊಲೀಸ್ ಕಮಿಷನರ್ ಹಾಗೂ ಎಸ್ಪಿ ವಿರುದ್ಧ ಉನ್ನತ ಮಟ್ಟದ ತನಿಖೆ ಆಗಬೇಕು. ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದು ಒತ್ತಾಯ ಮಾಡುವುದಾಗಿ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ನಗರದ ಸರ್ಕ್ಯುಟ್ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಐಪಿಎಸ್ ಅಧಿಕಾರಿಗಳ ಡಿಗ್ರಿ ಒಂದೇ ಆಗಿರುತ್ತದೆ. ಆದರೆ ದ.ಕ. ಜಿಲ್ಲೆಗೆ ಬರುವ ಅಧಿಕಾರಿಗಳು ಕೋಮು ದ್ವೇಷ, ಪ್ರಚೋದನಕಾರಿ ಭಾಷಣ, ಸಾಮಾಜಿಕ ಜಾಲ ತಾಣಗಳಲ್ಲಿ ದ್ವೇಷ ಹರಡುವವರ ವಿರುದ್ಧ ಒಂದೊಂದು ಶೈಲಿಯಲ್ಲಿ ಆಡಳಿತ ಮಾಡುತ್ತಾರೆ. ಈ ನಿಟ್ಟಿನಲ್ಲಿ ಹಿಂದಿನ ಅಧಿಕಾರಿಗಳ ವಿರುದ್ಧ ತನಿಖೆ ಆಗಬೇಕು ಎಂದು ಅವರು ಹೇಳಿದರು.
ಯಾರಿಗೂ ಪ್ರಚೋದನಕಾರಿ ಹೇಳಿಕೆಗೆ ಅವಕಾಶ ನೀಡಬಾರದು. ಹಜ್ ಯಾತ್ರೆಗೆ ಹೋಗುವ ಮುನ್ನ ಕಮೀಷನರ್, ಎಸ್ಪಿಗೂ ಹೇಳಿದ್ದೆ. ದ್ವೇಷ ಭಾಷಣ, ಪ್ರಚೋದನಕಾರಿ ಬರಹ ಬರೆಯುವರ ವಿರುದ್ದ ಕ್ರಮ ಕೈಗೊಳ್ಳಲು ಸ್ಪಷ್ಟವಾಗಿ ತಿಳಿಸಿದ್ದೆ. ಆಗ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದರು. ಕಾನೂನು ಸರಳ ಅಂತಾ ಎಲ್ಲಾ ಹೇಳಿದ್ದರು. ಆಗ ನೀವು ಪೊಲೀಸರ ಕೆಲಸ ಮಾಡಿ, ಅದು ಬಿಟ್ಟು ವಕೀಲರು ಅಥವಾ ನ್ಯಾಯಾಧೀಶರ ಕೆಲಸ ಮಾಡಬೇಡಿ ಎಂದು ಹೇಳಿದ್ದೆ. ಈಗ ನೂತನವಾಗಿ ಬಂದವರು ಕಠಿಣ ಕ್ರಮಕೈಗೊಂಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ದ್ವೇಷ, ಪ್ರಚೋದನಕಾರಿ ಪೋಸ್ಟ್ ಗಳು ಶೇ.60ರಷ್ಟು ಎಲ್ಲವೂ ಸರಿಯಾಗಿದೆ ಎಂದು ಅವರು ಹೇಳಿದರು.
ಯಾರಿಗೆ ಯಾರನ್ನೂ ಕೊಲ್ಲುವ ಹಲ್ಲೆ ಮಾಡುವ ಅಧಿಕಾರ ಇಲ್ಲ. ಇದರ ವಿರುದ್ದ ಎಲ್ಲರೂ ವಿರೋಧ ಮತ್ತು ಖಂಡನೆ ಮಾಡಬೇಕು. ಅಧಿಕಾರಿಗಳು ಎಲ್ಲರೂ ಒಂದೇ ರೀತಿ ಕಾನೂನು ನಡೆಸಲಿ. ಸರಕಾರ ಇದರ ಬಗ್ಗೆ ಅಧಿಕಾರಿಗಳಿಗೆ ಎಸ್‌ಒಪಿ ಮಾಡಲಿ ಎಂದು ಹೇಳಿದರು.
ಮಂಗಳೂರಿನಲ್ಲಿ ಇತ್ತೀಚಿಗೆ ನಡೆದ ಘಟನೆಗಳು ಬೇಸರದ ವಿಚಾರವಾಗಿದೆ. ಇದು ಜಿಲ್ಲೆಯ ಸೌಹಾರ್ದತೆಗೆ ಒಂದು ಕಪ್ಪು ಚುಕ್ಕೆ. ನಮ್ಮ ಗುರಿ ಜಿಲ್ಲೆಯಲ್ಲಿ ಸೌಹಾರ್ದತೆ ಮೂಡಿಸುವಂತಾಗಿರಬೇಕು. ಭಿನ್ನಾಭಿಪ್ರಾಯ ಇರಬಾರದು ಎಂದಿಲ್ಲ. ಅದನ್ನು ಮಾತುಕತೆ ಮೂಲಕ ಬಗೆಹರಿಸಬೇಕು. ಇದು ಕೇವಲ ಜನಪ್ರತಿನಿಧಿಗಳಿಂದ ಮಾತ್ರ ಅಲ್ಲ ಪ್ರತಿಯೊಬ್ಬ ನಾಗರಿಕರು, ಸಂಘ ಸಂಸ್ಥೆಗಳ ಜವಾಬ್ಧಾರಿ ಕೂಡಾ ಇದೆ. ಜನಪ್ರತಿನಿಧಿಗಳು ಆಡುವ ಮಾತು ಸಮಾಜದ ಒಗ್ಗಟ್ಟಿಗಾಗಿ ಇರಬೇಕೇ ಹೊರತು ಸಮಾಜ ಒಡೆಯಲು ಅಲ್ಲ. ಯಾವುದೇ ಧರ್ಮ ಕೂಡ ಮನುಷ್ಯನ ಮನಸ್ಸಿಗೆ ಮತ್ತು ದೇಹಕ್ಕೆ ಗಾಯ ಮಾಡುವ ಕತ್ತಿ ಆಗಬಾರದು. ಅದು ಮನಸ್ಸಿಗೆ ಮತ್ತು ದೇಹಕ್ಕೆ ಹಿತ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಪೋಲಿಸರ ಪಾತ್ರ ಹೆಚ್ಚಿದೆ. ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಗೆ ನಿಷ್ಪಕ್ಷಪಾತ ಕ್ರಮ ಅಗತ್ಯ ಎಂದು ಹೇಳಿದರು.
ಜಿಲ್ಲೆಯ ಶಾಂತಿ ಸುವ್ಯವಸ್ಥೆ ಹಾಳಾಗುವಂತಹ ಯಾವುದೇ ಘಟನೆಗೆ ನಾವು ಬೆಂಬಲ ಕೊಡಬಾರದು. ಈ ಬಗ್ಗೆ ಜಿಲ್ಲೆಯ ಜನರು, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಮೆರೆಯಬೇಕು. ಸುಹಾಸ್ ಹತ್ಯೆಯಾದಾಗಲೇ ಪ್ರತಿಕಾರ ಆಗುವ ಎಚ್ಚರಿಕೆನೂ ಇತ್ತು. ಎಲ್ಲಾ ಕಡೆ ದ್ವೇಷ ಭಾಷಣ ನಡೆಯಿತು. ಆದರೆ ಇಲಾಖೆ ಈ ಬಗ್ಗೆ ಸುಮ್ಮನೆ ಇತ್ತು ಎಂದು ಅವರು ನುಡಿದರು.
ಈ ರೀತಿಯ ಕೃತ್ಯ ಮಾಡಿದವರಿಗೆ ಯಾರು ಸಹಕಾರ ನೀಡಬಾರದು. ವಕೀಲರು, ಕೋರ್ಟ್, ಜನಪ್ರತಿನಿಧಿಗಳು ಯಾರು ಕೂಡಾ ಬೆಂಬಲ ನೀಡಬಾರದು. ಇದರಿಂದ ಮಾತ್ರ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಸಾಧ್ಯ ಎಂದು ಹೇಳಿದರು.