
ನಿರಂತರ ರಕ್ತದಾನದಿಂದ ಆರೋಗ್ಯಪೂರ್ಣ ಹೃದಯ: ಡಾ. ಎಚ್.ಆರ್. ತಿಮ್ಮಯ್ಯ
ಮಂಗಳೂರು: ನಿರಂತರ ರಕ್ತದಾನ ಮಾಡುವ ರಕ್ತದಾನಿಗಳ ದೇಹದಲ್ಲಿ ಶುದ್ದ ರಕ್ತ ಉತ್ಪಾದನೆಯಾಗುತ್ತಲೇ ಇರುವ ಕಾರಣ ಹೆಚ್ಚು ಆರೋಗ್ಯವಂತರಾಗಿರುತ್ತಾರೆ. ಇದರಿಂದ ಅವರ ಹೃದಯವೂ ಆರೋಗ್ಯ ಪೂರ್ಣವಾಗಿರುತ್ತದೆ. ತುರ್ತು ಸಂದರ್ಭ ಜೀವ ಉಳಿಸಲು ನೆರವಾಗುವ ರಕ್ತದಾನದ ಬಗ್ಗೆ ಯುವ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅವಶ್ಯ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹೇಳಿದರು.
ಅವರು ಇಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾ ಸಮಿತಿ ವತಿಯಿಂದ ಎಸ್‌ಡಿಎಂ ಪಿ.ಜಿ. ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ನಗರದ ಕೊಡಿಯಾಲ್‌ಬೈಲ್‌ನ ಎಸ್‌ಡಿಎಂ ಕಾನ್ಫರೆನ್ಸ್ ಹಾಲ್‌ನಲ್ಲಿ ಶನಿವಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್ ದ.ಕ. ಜಿಲ್ಲಾ ಸಮಿತಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ‘ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭ ಅವಶ್ಯ ಇರುವವರಿಗೆ ರೆಡ್‌ಕ್ರಾಸ್‌ನ ಬ್ಲಡ್ ಬ್ಯಾಂಕ್ ವತಿಯಿಂದ ಸಂಪೂರ್ಣ ಉಚಿತವಾಗಿ ರಕ್ತ ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಪಿಎಲ್ ಕಾರ್ಡ್ ಇರುವವರು ಯಾವುದೇ ಆಸ್ಪತ್ರೆಯಲ್ಲಿ ದಾಖಲಾದರೂ ರೆಡ್‌ಕ್ರಾಸ್‌ನಿಂದ ಉಚಿತವಾಗಿ ರಕ್ತ ಒದಗಿಸಲು ಯೋಜನೆ ರೂಪಿಸಲಾಗುವುದು ಎಂದರು.
ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್ ಡಿ.ಎಸ್., ಎಸ್‌ಡಿಎಂ ಪಿ.ಜಿ. ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ನಿರ್ದೇಶಕಿ ಡಾ. ಸೀಮಾ ಎಸ್. ಶೆಣೈ, ಕೆಎಂಸಿಯ ಆರ್ಥೋ ವಿಭಾಗದ ಮುಖ್ಯಸ್ಥ ಡಾ. ಕೆ.ಆರ್. ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
15ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ರಕ್ತದಾನಿಗಳನ್ನು ಸನ್ಮಾನಿಸಲಾಯಿತು. ರೆಡ್‌ಕ್ರಾಸ್ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಡಾ. ಸತೀಶ್ ರಾವ್, ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಡಾ. ಸಚ್ಚಿದಾನಂದ ರೈ, ಪಿ.ಬಿ. ಹರೀಶ್ ರೈ, ಸಲಹೆಗಾರರಾದ ಪ್ರಭಾಕರ ಶರ್ಮ, ಕೆ. ಸುಧಾಕರ್ ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಸ್ವಾಗತಿಸಿ, ಎಸ್‌ಡಿಎಂ ಪಿ.ಜಿ. ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್‌ನ ಯೂತ್ ರೆಡ್‌ಕ್ರಾಸ್ ಅಧಿಕಾರಿ ಡಾ. ರಮ್ಯ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಬಿ. ಅಪೂರ್ವ ರಕ್ತದಾನಿಗಳ ವಿವರ ನೀಡಿದರು. ವೈಷ್ಣವಿ ಆಚಾರ್ ಕಾರ್ಯಕ್ರಮ ನಿರೂಪಿಸಿದರು.