
ಜಿಲ್ಲೆಯಲ್ಲಿ ಯಾವುದೇ ರೀತಿಯ ಕೋವಿಡ್ ಆತಂಕವಿಲ್ಲ: ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ
ಮಂಗಳೂರು: ಕೋವಿಡ್ ಪ್ರಕರಣಗಳಿಗೆ ಸಂಬಂಧಿಸಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳ ನೈಜತೆಯನ್ನು ಪರಿಶೀಲಿಸದೆ ಫಾರ್ವಡ್ ಮಾಡುವ ಅಥವಾ ಆತಂಕ ಪಡುವ ಅಗತ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಕೊರೊನಾ ಸೋಂಕಿನ ಯಾವುದೇ ಆತಂಕವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಸ್ಪಷ್ಟಪಡಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಬಗ್ಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಮಾತ್ರವೇ ಕೋವಿಡ್ ಪರೀಕ್ಷೆಗೆ ಅನುಮತಿ ಇದೆ. ಉಳಿದಂತೆ ಯಾವುದೇ ಖಾಸಗಿ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲು ಅವಕಾಶವಿಲ್ಲ ಎಂದರು.
ತೀವ್ರ ತೆರನಾದ ಉಸಿರಾಟದ ಸಮಸ್ಯೆ (ಎಸ್‌ಎಎಆರ್) ಇರುವವರನ್ನು ಮಾತ್ರವೇ ಪರೀಕ್ಷೆಗೆ ಒಳಪಡಿ ಸಲಾಗುತ್ತದೆ. ಕೋವಿಡ್‌ಗೆ ಸಂಬಂಧಿಸಿ ಚಿಕಿತ್ಸೆ ಹಾಗೂ ತಪಾಸಣೆಗೆ ಅಗತ್ಯವಾದ ಎಲ್ಲಾ ರೀತಿಯ ಅಗತ್ಯ ಪರಿಕರಗಳು ದಾಸ್ತಾನು ಇದೆ. ಜಿಲ್ಲೆಯಲ್ಲಿ ಮೇವರೆಗೆ ಮೂವರು ಮಹಿಳೆಯರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಅವರೆಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಅವರು ಹೇಳಿದರು.
ಕೋವಿಡ್ ಈಗ ಉಳಿದ ಎಲ್ಲ ಸೋಂಕುಗಳಂತೆ ಸಾಮಾನ್ಯ ರೋಗವಾಗಿದೆ. ಕೊರೋನಾ ರೋಗಾಣು ಈಗ ದುರ್ಬಲವಾಗಿದೆ. ಆದರೆ, ಎಚ್ಚರಿಕೆ ಅಗತ್ಯ. ಕೊರೊನಾ ಎದುರಿಸಲು ಅಣಕು ಪ್ರದರ್ಶನ ಆರೋಗ್ಯ ಇಲಾಖೆ ವತಿಯಿಂದ ನಡೆಸಲಾಗುತ್ತದೆ.
ಕೋವಿಡ್ ಸೋಂಕು ನಿಯಂತ್ರಣಕ್ಕೆ ಸ್ವಯಂ ಜಾಗೃತಿ ವಹಿಸಿದುವುದು ಅತೀ ಅಗತ್ಯ. ಜನಜಂಗುಳಿ ಇರುವಲ್ಲಿ ಸೇರದಿರುವುದು, ಕೈಬಾಯಿ ತೊಳೆಯವುದು, ಸ್ವಯಂ ಪ್ರೇರಿತವಾಗಿ ಮಾಸ್ಕ್ ಧರಿಸುವುದು, ಕೆಮ್ಮುವಾಗ ಇತರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವಂತಹ ಕ್ರಮಗಳನ್ನು ಅನುಸರಿಸಿದರೆ ಉತ್ತಮ. ಜ್ವರ ಕಾಣಿಸಿಕೊಂಡು ಉಸಿರಾಟಕ್ಕೆ ತೊಂದರೆ ಇದ್ದಾಗ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ನಡೆಸುವುದು ಅಗತ್ಯ ಎಂದು ಡಾ. ತಿಮ್ಮಯ್ಯ ಹೇಳಿದರು.
ಕೋವಿಡ್ ಸಾಂಕ್ರಾಮಿಕವನ್ನು ಎದುರಿಸಲು ದ.ಕ. ಜಿಲ್ಲೆ ಸನ್ನದ್ಧವಾಗಿದೆ. ಹಾಗಾಗಿ ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕ ಪಡುವುದು ಬೇಡ ಎಂದು ಹೇಳಿದರು.