
ಕೊಟ್ಟಾರಚೌಕಿ ಪ್ರದೇಶಕ್ಕೆ ಶಾಸಕ ಭರತ್ ಶೆಟ್ಟಿ ಭೇಟಿ
Monday, June 16, 2025
ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಕೊಟ್ಟಾರಚೌಕಿ ಪ್ರದೇಶಕ್ಕೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿಯವರು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.
ಕೊಟ್ಟಾರಚೌಕಿ ಅತ್ಯಂತ ತಗ್ಗಾದ ಸ್ಥಳ, ಈ ಹಿಂದಿನ ಸ್ಥಿತಿಗತಿಯನ್ನು ನೋಡಿದಾಗ ಮಳೆಗಾಲದಲ್ಲಿ ರಸ್ತೆ ಹೊಂಡ, ಮಳೆ ನೀರು, ಜಂಕ್ಷನ್‌ನಲ್ಲಿ ಸಮಸ್ಯೆ, ಟ್ರಾಫಿಕ್ ಹೀಗೆ ಸಮಸ್ಯೆಗಳ ದೂರುಗಳ ಸರಮಾಲೆಯೇ ಇತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಕೊಟ್ಟಾರ ಜಂಕ್ಷನ್ ಸಮಸ್ಯೆ ಪರಿಹಾರಕ್ಕೆ ಕೋಟ್ಯಾಂತರ ವೆಚ್ಚದಲ್ಲಿ ಸುಸಜ್ಜಿತ ರಸ್ತೆ, ನೀರು ಹರಿಯಲು ಕಲ್ವರ್ಟ್ ನಿರ್ಮಾಣ ಮಾಡಲಾಗಿದೆ ಎಂದು ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಹೇಳಿದರು.
ಕೊಟ್ಟಾರಚೌಕಿಯ ಸಮಸ್ಯೆ ಪೂರ್ತಿಯಾಗಿ ಬಗೆಹರಿಸಲು ಇನ್ನಷ್ಟು ಅನುದಾನದ ಅಗತ್ಯವಿದೆ. ರಾಜಕಾಲುವೆ ಮಳೆಗೆ ಉಕ್ಕಿ ರಸ್ತೆಗೆ ಬಾರದಂತೆ ರಿಟೈನಿಂಗ್ ವಾಲ್ ಹಾಗೂ ರಾಜಕಾಲುವೆಯನ್ನು ಮತ್ತಷ್ಟು ಸಂಪರ್ಕಿಸುವ ತೋಡು ರಚನೆ ಅಗತ್ಯವಿದೆ. ಇದನ್ನು ಮುಂದಿನ ಹಂತದಲ್ಲಿ ಕೈಗೆತ್ತಿಕೊಂಡು ಕೃತಕ ನೆರೆಗೆ ಮುಕ್ತಿ ಹಾಡಲು ಈಗಾಗಲೇ ಮಾಜಿ ಮೇಯರ್ ಮನೋಜ್, ಮಾಜಿ ಕಾರ್ಪೋರೇಟರ್ ಕಿರಣ್ ಕುಮಾರ್ ಅವರಲ್ಲಿ ಚರ್ಚಿಸಿದ್ದೇನೆ. ಶೀಘ್ರ ಪಾಲಿಕೆ ಅಧಿಕಾರಿಗಳ ಸಭೆ ಕರೆದು, ಚರ್ಚಿಸಿ ಅನುದಾನ ಮೀಸಲಿಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.