
ರಾಜಕಾರಣ ಬೇಡ-ಸರಕಾರದ ಒಳ್ಳೆಯ ಕೆಲಸ ಬೆಂಬಲಿಸಿ: ಪದ್ಮರಾಜ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳ ಕಾಲ ಸುರಿದ ಮಳೆಯಿಂದ ಆಸ್ತಿಪಾಸ್ತಿ ನಷ್ಟದ ಜತೆಗೆ ಪ್ರಾಣಹಾನಿಯಾಗಿದೆ. ಈ ನಡುವೆ ಸ್ಥಳೀಯ ಶಾಸಕರು ಪರಿಹಾರ ಕಾರ್ಯ ಸೇರಿದಂತೆ ಅಭಿವೃದ್ಧಿಯಲ್ಲಿ ಸರಕಾರಕ್ಕೆ ಬೆಂಬಲ ನೀಡುವುದು ಬಿಟ್ಟು ಟೀಕೆಯಲ್ಲಿ ನಿರತರಾಗಿದ್ದಾರೆ. ಇನ್ನಾದರೂ ಕಪಟ ರಾಜಕಾರಣ ಬದಿಗಿಟ್ಟು ಸರಕಾರದ ಒಳ್ಳೆಯ ಕಾರ್ಯದಲ್ಲಿ ಬೆಂಬಲಿಸಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪದ್ಮರಾಜ್, ದ.ಕ. ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು, ಮಳೆ ಹಾನಿ ಸಾಕಷ್ಟು ಸಂಕಷ್ಟಗಳಿಗೆ ಕಾರಣವಾಗಿದೆ. ಮಳೆಹಾನಿಯಾಗಿ ಪ್ರಾಣ ಕಳೆದುಕೊಂಡವರ ಮನೆಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರ ನಿರ್ದೇಶದನ ಮೇರೆಗೆ ಭೇಟಿ ನೀಡಿರುವ ಉಸ್ತುವಾರಿ ಸಚಿವರು ಪರಿಹಾರ ನೀಡುವ ಕಾರ್ಯವನ್ನು ಅಧಿಕಾರಿಗಳ ಮುತುವರ್ಜಿಯಲ್ಲಿ ನೆರವೇರಿಸಿದ್ದಾರೆ ಎಂದರು.
ಆದರೆ ಶಾಸಕರು ಮಾತ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ ನಿರತರಾಗಿದ್ದಾರೆ. ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡಿದ ವೇಳೆ ಮಳೆ ಹಾನಿಯಿಂದಾದವರಿಗೆ ಪರಿಹಾರ ಹಾಗೂ ಇತರ ಅಗತ್ಯ ಕ್ರಮ ಕೈಗೊಳ್ಳುವ ಕುರಿತಂತೆ ಶಾಸಕರಿಗೆ ಚರ್ಚಿಸಲು ತಡೆಯಾಗಿರುವ ವಿಷಯವಾದರೂ ಏನು ಎಂದು ಪ್ರಶ್ನಿಸಿದ ವರು, ನಗರದಲ್ಲಿ ನೆರೆಯಿಂದ ಸಾಕಷ್ಟು ಅನಾಹುತಗಳಾಗಿವೆ. ಐದು ವರ್ಷಗಳ ಕಾಲ ಮನಪಾದಲ್ಲಿ ಬಿಜೆಪಿ ಆಡಳಿತ ನಡೆಸಿದೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ವೈಜ್ಞಾನಿಕ ಕಾಮಗಾರಿಗಳು ಕೃತಕ ನೆರೆ ಸೃಷ್ಟಿಗೆ ಕಾರಣವಾಗಿದೆ. ಆ ಬಗ್ಗೆ ವಿಮರ್ಶೆ ಮಾಡುವುದು ಬಿಟ್ಟು ಸುಮ್ಮನೆ ಸರಕಾರವನ್ನು ಟೀಕಿಸುವುದು ಸರಿಯಲ್ಲ ಎಂದವರು ಹೇಳಿದರು.
ಕೊಲೆ ಸುಹಾಸ್ ಶೆಟ್ಟಿಯದ್ದಾಗಿರಲಿ, ರೆಹಮಾನ್ ಅವರದ್ದಾಗಿರಲಿ ಅದು ದ.ಕ. ಜಿಲ್ಲೆ ತಗ್ಗಿಸುವ ವಿಚಾರ. ಆದರೆ ಅಬ್ದುಲ್ ರಹಿಮಾನ್ ಅವರ ವಿಚಾರದಲ್ಲಿ ಆತ ಯಾವುದೇ ಅಪರಾಧ ಹಿನ್ನೆಲೆ ಹೊಂದಿರದ, ಸೌಹಾರ್ದತೆಯಿಂದ ಇದ್ದ ಅಮಾಯಕ ವ್ಯಕ್ತಯನ್ನು ಜತೆಯಲ್ಲಿದ್ದವರೇ ಕೊಲೆ ಮಾಡಿದ್ದು, ಇದು ಖಂಡನೀಯ. ಜಿಲ್ಲೆಗೆ ಉತ್ತಮ ಅಧಿಕಾರಿಗಳು ಬಂದಿದ್ದು, ಸ್ವಸ್ಥ ಸಮಾಜ ನಿರ್ಮಾಣ ಆಗುವ ಭರವಸೆ ಇದೆ. ರಾಜಕಾರಣಿಗಳು ಕೂಡಾ ಪ್ರಚೋದನೆ ನೀಡುವ ಮಾತುಗಳ್ನು ನಿಲ್ಲಿಸಬೇಕು. ಇಂತಹ ಪ್ರಚೋದನೆಗಳಿಂದ ಆಗುವ ಅನಾಹುತಗಳ ಬಗ್ಗೆ ಅವರು ತಮ್ಮ ಕುಟುಂಬಕ್ಕೆ ಹೋಲಿಕೆ ಮಾಡಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಪರಿಹಾರ ನೀಡುವ ಕಾರ್ಯ ಸರಕಾರದಿಂದ ಆಗುತ್ತಿದೆ. ನಾಪತ್ತೆಯಾಗಿರುವ ಮೀನುಗಾರರ ಕುಟುಂಬಗಳನ್ನು ಕೂಡಾ ಸಚಿವರು ಭೇಟಿ ನೀಡಿ ಸಾಂತ್ವಾನ ನೀಡಿದ್ದಾರೆ. ಮೀನುಗಾರರ ಕುಟುಂಬದ ಜತೆ ಸರಕಾರ ಇದೆ. ಮೂಡಬಿದ್ರೆಯಲ್ಲಿ ಸೇತುವೆ ಕುಸಿದು ವ್ಯಕ್ತಿಯೊಬ್ಬರು ಮೃತ್ತಪಟ್ಟಿದ್ದು, ಈ ಬಗ್ಗೆಯೂ ತಕ್ಷಣ ಸ್ಪಂದಿಸಲಾಗಿದೆ. ಮಳೆ ಮುಂದುವರಿಯಲಿದ್ದು, ಪ್ರಾಕೃತಿಕ ವಿಕೋಪಗಳ ಸಂದರ್ಭ ನೆರವಾಗಲು ಪಕ್ಷದ ಕಾರ್ಯಕರ್ತರ ತಂಡ ಮಾಡಿಕೊಂಡು ಸಿದ್ಧವಾಗಿದೆ ಎಂದವರು ಹೇಳಿದರು.
ಶಾಸಕ ಡಾ. ಭರತ್ ಶೆಟ್ಟಿಯವರು ಉಪ ಮುಖ್ಯಮಂತ್ರಿ ಡಿಕೆಶಿ ಹೇಳಿಕೆ ವಿರುದ್ಧ ಮಾತನಾಡಿದ್ದಾರೆ. ಡಿಕೆಶಿಯವರು ಇಲ್ಲಿನ ಪರಿಸ್ಥಿತಿಯಿಂದ ಬೇಸತ್ತು ಆಡಿರುವ ಮಾತೇ ಹೊರತು ಜಿಲ್ಲೆಯನ್ನು ಅವಮಾನಿಸುವ ಪ್ರಶ್ನೆಯೇ ಅಲ್ಲಿಲ್ಲ. ಬಿಜೆಪಿ ಶಾಸಕರು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ಕೊಡಿಸುವಲ್ಲಿ ಸಹಕರಿಸಲಿ ಎಂದು ಹೇಳಿದ ಪದ್ಮರಾಜ್, ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿಯಾಗಿ ಬರಹಗಳ ಮೂಲಕ ತಮ್ಮ ಹಾಗೂ ತಮ್ಮ ಕುಟುಂಬದ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಮುಖಂಡರಾದ ಶಶಿಧರ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಸುಹಾನ್ ಆಳ್ವ, ದಿನೇಶ್ ಮೂಳೂರು, ಅಪ್ಪಿ, ನೀರಜ್ಚಂದ್ರ ಪಾಲ್, ಟಿ. ಹೊನ್ನಯ್ಯ, ಪ್ರೇಮ್ ಬಳ್ಳಾಲ್ಬಾಗ್ ಉಪಸ್ಥಿತರಿದ್ದರು.