.jpeg)
ಮಳೆ ಅವಘಡಗಳಿಗೆ ತಕ್ಷಣ ಸ್ಪಂದಿಸಿ-ವಿಳಂಬ ಬೇಡ: ದಿನೇಶ್ ಗುಂಡೂರಾವ್
ಮಂಗಳೂರು: ಮಳೆಗಾಲದಲ್ಲಿ ಸಂಭವಿಸುವ ಅವಘಢಗಳಿಗೆ ತಕ್ಷಣ ಸ್ಪಂದಿಸಬೇಕು. ಪರಿಹಾರ ಧನ ವಿತರಣೆಯಲ್ಲಿ ಯಾವ ಕಾರಣಕ್ಕೂ ವಿಳಂಬವಾಗಬಾರದು. ಹಾನಿ, ಅನಾಹುತಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತಾಳಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದ ಪಡೀಲ್‌ನಲ್ಲಿರುವ ದ.ಕ.ಜಿಲ್ಲಾಧಿಕಾರಿ ಕಚೇರಿ ಪ್ರಜಾ ಸೌಧದ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಬಾರಿ ಎಲ್ಲೆಲ್ಲಿ ಭೂಕುಸಿತ, ಗುಡ್ಡ ಜರಿತದಂತಹ ಅನಾಹುತ ಸಂಭವಿಸಿದೆಯೋ ಅಲ್ಲೆಲ್ಲಾ ಮುಂಜಾಗ್ರತೆ ವಹಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿತ್ತು. ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಅದಕ್ಕಿಂತ ಮುಂಚೆಯೇ ಸೂಕ್ತ ಕ್ರಮ ಜರುಗಿಸಬೇಕು. ಮಳೆಗಾಲದಲ್ಲಿ ಸಂಭವಿಸುವ ಯಾವುದೇ ಹಾನಿ, ಅನಾಹುತಗಳ ಬಗ್ಗೆ ನಿರ್ಲಕ್ಷ್ಯ ತಾಳಬಾರದು. ಪರಿಹಾರ ಧನ ವಿತರಣೆಗೆ ನೆಪ ಹೇಳಬಾರದು. ಅಪಾಯದ ಅಂಚಿನಲ್ಲಿರುವ ಹಳೆಯ ಸೇತುವೆಗಳಲ್ಲಿ ವಾಹನ ಸಂಚಾ ರಕ್ಕೆ ಯೋಗ್ಯವೇ ಎಂಬುದರ ಬಗ್ಗೆ ತಜ್ಞರ ವರದಿ ತಯಾರಿಸಬೇಕು.ಜಿಲ್ಲಾ ಮತ್ತು ತಾಲೂಕು ನಿಯಂತ್ರಣ ಕೊಠಡಿಗಳು ದಿನದ 24 ಗಂಟೆಯೂ ಸೇವೆಗೆ ಸಿಗುವಂತೆ ನೋಡಿಕೊಳ್ಳಬೇಕು. ಕೆತ್ತಿಕ್ಕಲ್ ಸಹಿತ ಅಪಾಯಕಾರಿ ಭೂಪ್ರದೇಶ, ಗುಡ್ಡ ಪ್ರದೇಶಗಳ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಸೂಚಿಸಿದರು.
ದ.ಕ.ಜಿಲ್ಲೆಯಲ್ಲಿ ಈವರೆಗೆ ವಾಡಿಕೆಗಿಂತ ಅಧಿಕ ಮಳೆಯಾಗಿದೆ. 38.4 ಮಿ.ಮೀ.ಮಳೆಯಾಗಬೇಕಾದ ಈ ಅವಧಿಯಲ್ಲಿ 55.7 ಮಿ.ಮೀ. ಮಳೆಯಾಗಿದೆ. 82 ಮನೆಗಳಿಗೆ ಸಂಪೂರ್ಣ ಹಾನಿ ಮತ್ತು 705 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಉಳ್ಳಾಲ ತಾಲೂಕಿನಲ್ಲಿ ನಾಲ್ಕು ಮತ್ತು ಮೂಡುಬಿದಿರೆ ತಾಲೂಕಿ ನಲ್ಲಿ ಒಂದು ಸಹಿತ ದ.ಕ.ಜಿಲ್ಲೆಯಲ್ಲಿ ಈವರೆಗೆ ಐವರು ಪ್ರಾಕೃತಿಕ ವಿಕೋಪದಿಂದ ಪ್ರಾಣ ಕಳಕೊಂಡಿ ದ್ದಾರೆ. 2.43 ಹೆಕ್ಟೇರ್ ಕೃಷಿ ಮತ್ತು 4.884 ಹೆಕ್ಟೇರ್ ತೋಟಗಾರಿಕೆ ಭೂಮಿಗೆ ಹಾನಿಯಾಗಿದೆ. ತೋಟಗಾರಿಕೆ ಬೆಳೆ ಹಾನಿಯಲ್ಲಿ 1.36 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ. ಜೂ.೧೭ರವರೆಗೆ 4324 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದರೆ, 216.20 ಕಿಲೋ ಮೀ.ಲೈನ್ಗೆ ತೊಂದರೆಯಾಗಿದೆ ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಭೂಕುಸಿತ ತಡೆಗೆ 36 ಕಾಮಗಾರಿ: ಮಲೆನಾಡು ಮತ್ತೆ ಕರಾವಳಿ ಪ್ರದೇಶದಲ್ಲಿ ಭೂಕುಸಿತ ತಡೆಗಟ್ಟಲು 100 ಕೋ.ರೂ. ಅನುದಾನ ಮೀಸಲಿಡಲಾಗಿದೆ. ಇದರಲ್ಲಿ ದ.ಕ. ಜಿಲ್ಲೆಯಲ್ಲಿ 37 ಕೋ.ರೂ.ಗಳ 36 ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಗ್ರಾಪಂ ಮಟ್ಟದಿಂದ ಭೂಕುಸಿತ ಸಂಭಾವ್ಯ ಪ್ರದೇಶಗಳನ್ನು ಗುರುತಿಸಿ ಈ ಕಾಮಗಾರಿಗಳ ಪಟ್ಟಿ ತಯಾರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಇಲಾಖೆ ವ್ಯಾಪ್ತಿಯ 19 ಕಡೆಗಳಲ್ಲಿ ಸೇತುವೆಗಳನ್ನು ಮಂಜೂರು ಮಾಡಲಾಗಿದೆ. ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ವಾಹನ ಸಂಚಾರ ಮಾಡುವ ಕುರಿತು ತಜ್ಞರ ವರದಿಯನ್ನು ಪಡೆದುಕೊಂಡು ಅದರಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.
ಕೆತ್ತಿಕಲ್ ಭೂಕುಸಿತ: ವಾಮಂಜೂರು-ಗುರುಪುರ ನಡುವಿನ ರಾ.ಹೆ.ಯ ಕೆತ್ತಿಕಲ್ನಲ್ಲಿ ಭೂಕುಸಿತದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ರಾ.ಹೆ.ಬದಿಯ ಧರೆಯನ್ನು 90 ಡಿಗ್ರಿಯಲ್ಲಿ ಕಡಿದಿದ್ದರಿಂದಲೇ ಭೂಕುಸಿತ ಉಂಟಾಗುತ್ತಿದೆ. ಈ ಪ್ರದೇಶದಲ್ಲಿ ಕಳೆದ ವರ್ಷ ಭೂಕುಸಿತ ತಡೆಗೆ ಪರಿಹಾರ ಕಾಮಗಾರಿ ನಡೆಸಲಾಗಿತ್ತು. ಧರೆಯನ್ನು ಅವೈಜ್ಞಾನಿಕವಾಗಿ ಕಡಿದಿದ್ದರಿಂದ ಪರಿಹಾರ ಕಾಮಗಾರಿ ನಡೆಸಿದ ಪ್ರದೇಶದಲ್ಲೇ ಮತ್ತೆ ಕುಸಿತ ಉಂಟಾಗಿದೆ ಎಂದು ತಿಳಿಸಿದರು.
ಸಜಿಲ್ಲಾಧಿಕಾರಿ ಮುಲ್ಲೈ ಮುಗಿನಲ್, ದ.ಕ.ಜಿಪಂ ಸಿಇಒ ಡಾ. ಆನಂದ್, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ದ.ಕ.ಜಿಲ್ಲಾ ಎಸ್ಪಿ ಡಾ. ಅರುಣ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು.