ನಕಲಿ ದಾಖಲೆ ಸೃಷ್ಟಿಸಿ ಐಷಾರಾಮಿ ಕಾರು ನೊಂದಣಿ: ಆರ್‌ಟಿಒ ಕಚೇರಿಯ ಮೂವರು ಅಮಾನತು

ನಕಲಿ ದಾಖಲೆ ಸೃಷ್ಟಿಸಿ ಐಷಾರಾಮಿ ಕಾರು ನೊಂದಣಿ: ಆರ್‌ಟಿಒ ಕಚೇರಿಯ ಮೂವರು ಅಮಾನತು

ಮಂಗಳೂರು: ಐಷಾರಾಮಿ ಕಾರು ನೋಂದಣಿ ವೇಳೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಲಕ್ಷಾಂತರ ರು. ತೆರಿಗೆ ವಂಚಿಸಿದ ಆರೋಪದಲ್ಲಿ ಮಂಗಳೂರು ಆರ್‌ಟಿಒ ಕಚೇರಿಯ ಮೂರು ಮಂದಿಯನ್ನು ಅಮಾನತುಗೊಳಿಸಲಾಗಿದೆ.

ಆರ್‌ಟಿಒ ಕಚೇರಿಯ ಪ್ರಥಮ ದರ್ಜೆ ಸಹಾಯಕ ನೀಲಪ್ಪ, ಕಚೇರಿ ಅಧೀಕ್ಷಕಿ ರೇಖಾ ನಾಯಕ್ ಹಾಗೂ ಸ್ಥಾನೀಯ ಸಹಾಯಕಿ ಸರಸ್ವತಿ ಅಮಾನತುಗೊಂಡವರು. ಆರ್‌ಟಿಒ  ಶ್ರೀಧರ್ ಮಲ್ಲಾಡ್ ವಿರುದ್ಧ ಇಲಾಖಾ ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. 

ಮಂಗಳೂರು ಆರ್‌ಟಿಒ ಕಚೇರಿಯಲ್ಲಿ 1,96,95,000 ರೂ.ಗಳ ಐಷಾರಾಮಿ ಕಾರನ್ನು 32,15,000 ರೂ. ಮೌಲ್ಯಕ್ಕೆ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡಿಕೊಳ್ಳಲಾಗಿತ್ತು. ಈ ಮೂಲಕ

ಆರ್‌ಟಿಒ ಅಧಿಕಾರಿ ಹಾಗೂ ಸಿಬ್ಬಂದಿ ಸರ್ಕಾರಕ್ಕೆ ಲಕ್ಷಾಂತರ ರು. ಮೊತ್ತದ ತೆರಿಗೆ ವಂಚಿಸಿರುವುದು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ಸಾರಿಗೆ ಇಲಾಖೆಯ ಶಿವಮೊಗ್ಗ ವಿಭಾಗದ ಉಪ ಆಯುಕ್ತರ ವರದಿ ಮೇರೆಗೆ ಬೆಂಗಳೂರಿನ ಆಯುಕ್ತರು ಅಮಾನತುಗೊಳಿಸಿ ಶುಕ್ರವಾರ ಆದೇಶಿಸಿದ್ದಾರೆ.

ನೋಂದಣಿಗೆ ಅರ್ಜಿ ಸಲ್ಲಿಸಿದ ವೇಳೆ ನೀಲಪ್ಪ ಅವರು ನಿಗದಿತ ಮೌಲ್ಯದ ಬದಲು ಕಡಿಮೆ ಮೊತ್ತದ ಮೌಲ್ಯ ನಮೂದಿಸಿದ್ದರು. ಆ ಅರ್ಜಿಯನ್ನು ರೇಖಾ ನಾಯಕ್ ಪರಿಶೀಲಿಸಿದ್ದರು,

ನಂತರ ಸರಸ್ವತಿ ಅವರು ಅರ್ಜಿಯನ್ನು ಅನುಮೋದಿಸಿದ ಆರೋಪಕ್ಕೆ ಒಳಗಾಗಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಕಾರು ನೋಂದಣಿ ಮಾಡಿ ಸರ್ಕಾರಕ್ಕೆ ತೆರಿಗೆ ನಷ್ಟ ಉಂಟು ಮಾಡಿರುವುದು ಮೈಸೂರಿನಲ್ಲಿ ದಾಖಲೆ ಪರಿಶೀಲನೆ ವೇಳೆ ಬೆಳಕಿಗೆ ಬಂದಿತ್ತು. ಬಳಿಕ ಮಂಗಳೂರು ಆರ್‌ಟಿಒ ಕಚೇರಿಗೆ ಶಿವಮೊಗ್ಗ ಉಪ ಆಯುಕ್ತರು ಭೇಟಿ ನೀಡಿ ತನಿಖೆ ಕೈಗೊಂಡಿದ್ದರು. ಉಪ ಆಯುಕ್ತರ ವರದಿಯ ಅಧಾರದಲ್ಲಿ ಬೆಂಗಳೂರಿನ ಆಯುಕ್ತ ಯೋಗೀಶ್ ಅವರು ಈ ಮೂವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಇಲಾಖಾ ವಿಚಾರಣೆ ಬಾಕಿ ಇರಿಸಿ ಇವರನ್ನು ಅಮಾನತುಗೊಳಿಸಿದ್ದಲ್ಲದೆ, ಬೇರೆ ಕಡೆಗಳಿಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ನೀಲಪ್ಪರನ್ನು ಶಿವಮೊಗ್ಗ, ರೇಖಾ ನಾಯಕ್‌ರನ್ನು ಮೂಲ ಪುತ್ತೂರು ಕಚೇರಿಯಿಂದ(ಮಂಗಳೂರಲ್ಲಿ ಪ್ರಭಾರ) ಚಿಕ್ಕಮಗಳೂರಿಗೆ ಹಾಗೂ ಸರಸ್ವತಿ ಅವರನ್ನು ಬೆಂಗಳೂರು ಉತ್ತರ ಆರ್‌ಟಿಒ ಕಚೇರಿಗೆ ವರ್ಗಾವಣೆಗೊಳಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article