ಸಂಘರ್ಷದ ಮೂಲ ಪತ್ತೆ ಮಾಡಿ: ಸಿ.ಟಿ.ರವಿ

ಸಂಘರ್ಷದ ಮೂಲ ಪತ್ತೆ ಮಾಡಿ: ಸಿ.ಟಿ.ರವಿ


ಮಂಗಳೂರು: ಸೋಮವಾರ ಮಂಗಳೂರಿಗೆ ಬಿಜೆಪಿ ನಿಯೋಗ ಆಗಮಿಸಲಿದೆ. ದ.ಕ. ಜಿಲ್ಲೆಗೆ ಭೇಟಿ ನೀಡಿ ಸುಹಾಸ್ ಶೆಟ್ಟಿ ಹತ್ಯೆ, ರೆಹಮಾನ್ ಹತ್ಯೆ ಹಾಗೂ ಸರಣಿ ಘಟನೆಗಳ ಅಧ್ಯಯನ ನಡೆಸಲಿದೆ. ಜಿಲ್ಲೆಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ವಿಪಕ್ಷ ನಿಯೋಗ ಬರಲಿದೆ. ಜಿಲ್ಲೆಯಲ್ಲಿ ಶಾಂತಿ ನೆಲೆಸಲೇ ಬೇಕು, ಇತ್ತೀಚೆಗೆ ಕಾಂಗ್ರೆಸ್‌ನ ಹರಿಪ್ರಸಾದ್ ಹಾಗೂ ನಾಸಿರ್ ನೇತೃತ್ವದ ನಿಯೋಗ ಕೂಡ ಶಾಂತಿ ಪ್ರಸ್ತಾಪನೆ ಮಾಡಿದ್ದಾರೆ. ನಾಸಿರ್ ಹುಸೇನ್ ವರದಿ ಎಷ್ಟು ಪ್ರಾಮಾಣಿಕ  ವರದಿಯಾಗಿರುತ್ತದೆ ಎನ್ನುವ ಸಂಶಯ ಇದೆ. ನಾಸಿರ್ ರಾಜ್ಯಸಭೆಗೆ ಆಯ್ಕೆಯಾದಾಗ ವಿಧಾನ ಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಎಂದು ಬೆಂಬಲಿಗರು ಘೋಷಣೆ ಕೂಗಿದ್ದರು ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಕೂಡ ಶಾಂತಿಗಾಗಿ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗಾಗಿ ಪೊಲೀಸರಿಗೆ ನನ್ನ ಕೆಲವು ಸಲಹೆಗಳನ್ನು ಕೊಡುತ್ತಿದ್ದೇನೆ. ಮೊದಲು ಸಂಘರ್ಷದ ಮೂಲ ಪತ್ತೆ ಮಾಡಿ, ಗೋ ಹತ್ಯೆ, ಲವ್ ಜಿಹಾದ್,  ಮತಾಂತರ ಇವು ಸಂಘರ್ಷದ ಮೂಲವಾಗಿದ್ದು, ಇದನ್ನು ನಿಲ್ಲಿಸಿದರೆ ಕೋಮು ದ್ವೇಷ ಚರ್ಚೆಯಲ್ಲೇ ಇರದು ಎನಿಸುತ್ತದೆ ಎಂದರು.

ಗೋ ಹತ್ಯೆ ಮಾಡುವವರು ಮತ್ತು ತಡೆಯುವವರನ್ನು ಒಂದೇ ತಕ್ಕಡಿಯಲ್ಲಿ ಇರಿಸಿ ನೋಡಲಾಗುತ್ತದೆ. ಪೊಲೀಸ್ ಇಲಾಖೆ ಇಂತಹ ಕೆಲಸ ಮಾಡಬಾರದು, ಗೋ ಹತ್ಯೆ  ಮಟ್ಟ ಹಾಕಿ, ಲವ್ ಜಿಹಾದ್ ಸಂಘಟಿತ ಕೃತ್ಯವನ್ನು ಸಂಪೂರ್ಣ ತಡೆಯಬೇಕು. ಅವರಿಗೆ ಸಂಘಟಿತ ಬೆಂಬಲ ಸಿಗುತ್ತಿದೆ. ಮತಾಂತರ ವ್ಯವಸ್ಥೆ ಮಟ್ಟ ಹಾಕಬೇಕು. ಹಿ ಗಾದಲ್ಲಿ ಜಗಳ ಮತ್ತು ಸಂಘರ್ಷ ನಿಂತು ಹೋಗಲಿದೆ ಎಂದರು.

ಇವರಿಗೆ ಹಣದ ಮೂಲ ಯಾವುದು?:

ಮತೀಯ ಕಾರಣಕ್ಕಾಗಿ ಕೆಲವರು ಇವರಿಗೆ ಹಣ ಪೂರೈಸುತ್ತಾರೆ. ಗಾಂಜಾ, ಮರಳು ದಂಧೆ, ಬೆಟ್ಡಿಂಗ್ ದಂಧೆ, ಅನೈತಿಕ ಕಾರ್ಯಕ್ಕೆ ಹಣಕಾಸು ಸಹಾಯ ಮಾಡುತ್ತದೆ.  ಎಸ್ಪಿ ಮತ್ತು ಕಮಿಷನರ್ ನಿಮ್ಮ ಇಲಾಖೆಯ ಕೆಲವರು ಇಂತಹವರ ಜೊತೆ ಕೈಜೋಡಿಸುತ್ತಿರುವುದನ್ನು ತಪ್ಪಿಸಿ, ಸಜ್ಜನರು ಮತ್ತು ದುರ್ಜನರನ್ನು ಒಂದೇ ತಕ್ಕಡಿಯಲ್ಲಿ  ಇಟ್ಟು ತೂಗುತ್ತಿದ್ದೀರಿ. ಹೀಗೆ ಮಾಡಿದರೆ ಇದು ವರ್ತಮಾನ ಮತ್ತು ಭವಿಷ್ಯಕ್ಕೆ ಬಹಳ ಮಾರಕವಾಗುತ್ತದೆ ಎಂದರು.

ಎಸ್ಪಿಯರು ಕಮ್ಯೂನಲ್ ಆರ್ಗನೈಸೇಶನ್ ಮತ್ತು ಕಮ್ಯುನಲ್ ವ್ಯಕ್ತಿಗಳು ಎಂದಿದ್ದಾರೆ. ಬಜರಂಗದಳವನ್ನು ಕಮ್ಯುನಲ್ ಎಂದು ಹೇಗೆ ಕರೆಯುತ್ತೀರಿ? ಇವುಗಳನ್ನು ಹಿ ಂದೂ ಪರ ಸಂಘಟನೆಗಳು ಎಂದು ಕರೆಯಿರಿ, ಒಪ್ಪಿಕೊಳ್ಳುತ್ತೇವೆ. ಹಿಂದೂ ವಿಚಾರಧಾರೆಗಳು ಕಮ್ಯುನಲ್ ಹೇಗೆ ಆಗುತ್ತವೆ?, ಹಾಗಿರುವಾಗ ಹಿಂದು ಸಂಘಟನೆಗಳು  ಹೇಗೆ ಕಮ್ಯುನಲ್ ಆಗುತ್ತವೆ? ಅನ್ಯಮತದಲ್ಲಿ ದೇವರಲ್ಲ, ಪ್ರವಾದಿ ಎಂದು ಹೇಳಿದರೆ ಕೊಂದು ಬಿಡುತ್ತಾರೆ ಎಂದರು.

ಸುಹಾಸ್ ಹತ್ಯೆಯಲ್ಲಿ ಕೆಲವು ವ್ಯಕ್ತಿಗತ ಕಾರಣ ಇದೆ, ತನಿಖೆ ಆಗಲಿ, ಆದರೆ ಅದಕ್ಕೂ ಮೊದಲೇ ವಿಹಿಂಪ, ಬಜರಂಗದಳ ಮುಖಂಡರ ಮೇಲೆ ಬೆರಳು ತೋರಿಸುತ್ತಾ  ಇದ್ದೀರಿ. ಈ ಹತ್ಯೆಯಲ್ಲಿ ಸಂಘಟನೆ ಟಾರ್ಗೆಟ್ ಮತ್ತು ಮುಗಿಸುವ ಕೆಲಸಕ್ಕೆ ನಾವು ಅವಕಾಶ ಕೊಡುವುದಿಲ್ಲ. ಮೊದಲು ಪೊಲೀಸ್ ಇಲಾಖೆ ನಾವು ಹೇಳಿದ ವಿಚಾರಗಳ  ಬಗ್ಗೆ ಗಮನ ಕೊಡಲಿ ಎಂದರು.

ಕಾಂಗ್ರೆಸ್ ಸರ್ಕಾರ ದಿನನಿತ್ಯ ಹಗರಣ ಮಾಡುತ್ತಿದೆ. ಒಂದು ಹಗರಣ ಇನ್ನೊಂದು ಹಗರಣವನ್ನು ಬದಿಗೆ ಸರಿಸುತ್ತಿದೆ. ಸಂವೇದನೆ, ನೈತಿಕತೆ ಹೊತ್ತಿಕೊಳ್ಳಬೇಕಾದವರು ಹೊತ್ತಿಕೊಳ್ಳೋದಿಲ್ಲ. ಈಗ ಹಗರಣವನ್ನೇ ಜೀರ್ಣಿಸುವಷ್ಟು ಶಕ್ತಿ ಕಾಂಗ್ರೆಸ್‌ಗೆ ಇದೆ ಎಂದು ಸಿ.ಟಿ. ರವಿ ಲೇವಡಿ ಮಾಡಿದರು.

ಆರ್‌ಸಿಬಿ ಸನ್ಮಾನ ಆಯೋಜಿಸಿದ್ದು ಕಮಿಷನರ್!

ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅಮಾನತಿನ ಬಗ್ಗೆ ಸಿ.ಟಿ.ರವಿ ವ್ಯಂಗ್ಯವಾಡಿದರು. ವಿಧಾ ನಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿದ್ದು ಬೆಂಗಳೂರು ಕಮೀಷನರ್, ಸರ್ಕಾರ ರಾಜಕೀಯ ಲಾಭ ತೆಗೆದುಕೊಳ್ಳಬೇಕು ಎನ್ನುವುದು ಕಮೀಷನರ್  ಆಸೆಯಾಗಿತ್ತು. ಕ್ರಿಕೆಟ್ ಆಟಗಾರರ ಜೊತೆ ಕಾಂಗ್ರೆಸ್ ಪಕ್ಷದ ಮುಖಂಡರ ಮಕ್ಕಳು, ಮೊಮ್ಮಕ್ಕಳು ಸೆಲ್ಫಿ ತೆಗೆದುಕೊಳ್ಳಲಿ ಎಂದು ಕಮಿಷನರ್ ವ್ಯವಸ್ಥೆ ಮಾಡಿದ್ರು. ಹೀಗೆ  ಕಮಿಷನರ್‌ರೇ ಎಲ್ಲವನ್ನೂ ಸಂಘಟಿಸಿದಂತೆ ಸರ್ಕಾರ ಅವರ ಮೇಲೆ ಕ್ರಮ ಕೈಗೊಂಡಿದೆ ಎಂದು ಸಿ.ಟಿ. ರವಿ ಆರೋಪಿಸಿದರು.

ಕಾಲ್ತುಳಿತ ಸಾವು ಘಟನೆ ಆದ ಬಳಿಕವೂ ಸಿಎಂ ಹೊಟೇಲಿಗೆ ತೆರಳಿ ದೋಸೆ ತಿಂದರೆ ಅವರಿಗೆ ಮನುಷ್ಯತ್ವ ಇಲ್ಲ. ಮುಖ್ಯಮಂತ್ರಿ ಆ ಕೆಲಸ ಮಾಡಿದರೆ ಭಗವಂತ ಅವರ ನ್ನು ಕ್ಷಮಿಸುವುದಿಲ್ಲ. ಅವರಿಗೆ ಮಕ್ಕಳನ್ನು ಕಳೆದುಕೊಂಡ ಹೆತ್ತವರ, ಸಮಾಜದ ಶಾಪ ತಟ್ಟುತ್ತದೆ. ಈ ಮಾಹಿತಿ ಸುಳ್ಳು ಆಗಲಿ ಎಂದು ಆಶಿಸುತ್ತೇನೆ. ಆದರೆ ಈ  ಮಾಹಿತಿ ಸತ್ಯ ಆಗಿದ್ದರೆ ಸಿಎಂ ಒಂದು ಕ್ಷಣವೂ ಅಧಿಕಾರದಲ್ಲಿ ಇರಲೇ ಬಾರದು ಎಂದರು. ಹೊರಗಡೆ ಕಾಲ್ತುಳಿತಕ್ಕೊಳಗಾದ ಗಾಯಾಳುಗಳನ್ನು ಕೈಯಲ್ಲಿ ಹೆಗಲಮೇಲೆ  ಹೊತ್ತುಕೊಂಡು ಹೋಗುತ್ತಿದ್ದರು. ಒಳಗಡೆ ಉಪಮುಖ್ಯಮಂತ್ರಿ ಟ್ರೋಫಿ ಎತ್ತಿಕೊಂಡಿದ್ದರು. ಹಾಗಾದರೆ ಈ ಎಲ್ಲ ಘಟನೆಗಳಿಗೆ ಹೊಣೆ ಯಾರು? ಕ್ರೆಡಿಟ್ ವಾರ್  ಮಾಡಿದವರು ಹೊಣೆಗಾರರು ಅಲ್ವಾ ಎಂದು ಸಿ.ಟಿ. ರವಿ ಪ್ರಶ್ನಿಸಿದರು.

ಶಾಸಕ ವೇದವ್ಯಾಸ್ ಕಾಮತ್, ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂತೋಷ್, ರಾಜಗೋಪಾಲ ರೈ, ಮನೋಹರ ಶೆಟ್ಟಿ, ಶೈಲೇಶ್, ಅರುಣ್ ಶೇಟ್ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article