
ಸಂಘಟನೆಯ ಹೆಸರನ್ನು ಕೆಡಿಸುವ ಪ್ರಯತ್ನ: ಪ್ರಭಂಜನ್ ಸೂರ್ಯ
ಮಂಗಳೂರು: ಕಳೆದ ಚುನಾವಣೆಯಲ್ಲಿ ಮುಸ್ಲಿಂ ವೋಟ್‌ಗಾಗಿ ಬಜರಂಗದಳವನ್ನು ನಿಷೇಧ ಮಾಡಲು ಹೊರಟ ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ರಾಜ್ಯದಾದ್ಯಂತ ಕಾರ್ಯಕರ್ತರು, ಸಂಘಟನೆಯ ಪ್ರಮುಖರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಸಂಘಟನೆಯ ಹೆಸರನ್ನು ಕೆಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಬಜರಂಗದಳ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಹೇಳಿದರು.
ಶನಿವಾರ ಮಂಗಳೂರಿನ ವಿಶ್ವಹಿಂದು ಪರಿಷತ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರ ಮುಂದುವರಿದ ಭಾಗವಾಗಿ ಕರಾವಳಿಯ ಭಾಗದಲ್ಲಿ ಬಜರಂಗದಳವನ್ನು ಗುರಿಯಾಗಿಟ್ಟುಕೊಂಡು ಕಾರ್ಯಕರ್ತರ ಮೇಲೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪ್ರಕರಣಗಳನ್ನು ದಾಖಲಿಸುವುದು, ರೌಡಿ ಶೀಟರ್ ಪಟ್ಟಿಯಲ್ಲಿ ಹೆಸರನ್ನು ಸೇರಿಸುವುದು, ಗೂಂಡಾ ಕಾಯ್ದೆ ಹೇರುವುದು ನಡೆದಿದೆ. ಇದೀಗ ಹತ್ಯೆ ಪ್ರಕರಣದಲ್ಲಿ ಬಜರಂಗದಳದ ಪ್ರಮುಖರಾದ ಭರತ್ ಕುಮ್ಡೇಲ್ ಅವರನ್ನು ಸೇರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
ಬಜರಂಗದಳ ರಾಷ್ಟ್ರ ಭಕ್ತ ಸಾಮಾಜಿಕ ಸಂಘಟನೆಯಾಗಿದ್ದು, ನೂರಾರು ಸೇವಾ ಚಟುವಟಿಕೆಗಳು, ಸಾವಿರಾರು ಗೋವುಗಳ ರಕ್ಷಣೆ, ಹೆಣ್ಣು ಮಕ್ಕಳ ರಕ್ಷಣೆ ಮುಂತಾದ ಹತ್ತಾರು ಕಾರ್ಯಗಳನ್ನು ಮಾಡಿಕೊಂಡು, ಕಾನೂನು ರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿರುವ ಸಂಘಟನೆಯಾಗಿದೆ. ಇಂತಹ ಸಂಘಟನೆಯ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಕಾಂಗ್ರೆಸ್‌ನ ಹಿಂದೂ ವಿರೋಧಿ ಧೋರಣೆಯನ್ನು ಇಡೀ ಹಿಂದೂ ಸಮಾಜ ವಿರೋಧಿಸುತ್ತದೆ ಎಂದು ಅವರು ಹೇಳಿದರು.
ಇದು ಯಾವ ನ್ಯಾಯ?:
ಪೊಲೀಸ್ ಇಲಾಖೆ ಗಡಿಪಾರು ನೋಟಿಸ್ ನೀಡಿದವರ ಪೈಕಿ ಹಿಂದುಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಯಾವುದೇ ಪ್ರಕರಣ ಇಲ್ಲದವರು, ಸಣ್ಣ ಕೇಸ್ ಇದ್ದವವರಿಗೂ ಗಡಿಪಾರು ನೋಟಿಸ್ ನೀಡಲಾಗಿದೆ. ಸುಮಾರು 100 ಮಂದಿ ಹಿಂದು ಸಂಘಟನೆಗಳ ಕಾರ್ಯಕರ್ತರ ಮನೆಗೆ ಪೊಲೀಸರು ರಾತ್ರಿ ವೇಳೆ ತೆರಳಿ ಬೆದರಿಸಿದ್ದಾರೆ. ಇದು ಯಾವ ನ್ಯಾಯ? ಸಮಾಜದ ಕೆಲಸ ಮಾಡುವ ಸಂಘಟನೆಗಳ ಕಾರ್ಯಕರ್ತರಿಗೆ ಕಿರುಕುಳ ಸರಿಯಲ್ಲ ಎಂದು ಬಜರಂಗದಳ ಪ್ರಾಂತ ಸಹಸಂಯೋಜಕ ಭುಜಂಗ ಕುಲಾಲ್ ಹೇಳಿದರು.
ಬಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ, ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ ಇದ್ದರು.