
ರಸ್ತೆ ತಡೆ ನಡೆಸಿದವರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಒಂದು ತಂಡ ಅಕ್ರಮವಾಗಿ ಜೂ.2 ರಂದು ರಾತ್ರಿ ವಿಟ್ಲ-ಕಲ್ಲಡ್ಕ ರಸ್ತೆಯಲ್ಲಿ ಹೋಗುವ ಲಾರಿಗಳನ್ನು ತಡೆದು ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೂ.2 ರಂದು ರಾತ್ರಿ ವೇಳೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಂಗಳಪದವು ಎಂಬಲ್ಲಿ ಕೆಲವು ಜನರು ಉದ್ದೇಶಪೂರ್ವಕವಾಗಿ ಅಕ್ರಮ ಕೂಟ ಸೇರಿಕೊಂಡು ವಿಟ್ಲ-ಕಲ್ಲಡ್ಕ ರಸ್ತೆಯಲ್ಲಿ ಹೋಗುವ ಲಾರಿಗಳನ್ನು ತಡೆದು ನಿಲ್ಲಿಸಿರುತ್ತಾರೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ, ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿರುತ್ತಾರೆ.
ಈ ವೇಳೆ ಸದ್ರಿ ರಸ್ತೆಯಲ್ಲಿ ಸಂಭವಿಸಿರುವ ಅಫಘಾತ ಪ್ರಕರಣಗಳನ್ನು ನೆಪವಾಗಿಟ್ಟುಕೊಂಡು ಆರೋಪಿಗಳಾದ ರಿಯಾಝ್, ಸಮದ್, ಕುಂಞಿಮೋನು, ರಹಿಮಾನ್ ಸಲೈಮಾನ್ ಮತ್ತು ಇತರ 25 ರಿಂದ 30 ಜನರು ರಸ್ತೆಯಲ್ಲಿ ಘನ ವಾಹನಗಳು ಸಂಚರಿಸದಂತೆ ತಡೆಯೊಡ್ಡಿರುವುದು ಹಾಗೂ ಸದ್ರಿ ರಸ್ತೆಯಲ್ಲಿ ಯಾವುದೇ ಘನ ಲಾರಿಗಳನ್ನು ಸಂಚರಿಸಲು ಬಿಡುವುದಿಲ್ಲ ಎಂಬುದಾಗಿ ಜೋರಾಗಿ ಬೊಬ್ಬೆ ಹಾಕಿದ್ದಾರೆ.
ಈ ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣಾ ಅ.ಕ್ರ: 73/2025 ಕಲಂ: 189(2)(3), 191 (2), 126(2), 190 BNS 2023 ಯಂತೆ ಪ್ರಕರಣ ದಾಖಲಾಗಿದೆ.