
ದ.ಕ ಜಿಲ್ಲೆಯ ಜನರ ಜ್ಞಾನ ಹಾಗೂ ಸಂಸ್ಕೃತಿ ಉತ್ತಮ: ಬೀಳ್ಕೊಡುಗೆ ಸಮಾರಂಭದಲ್ಲಿ ನಿರ್ಗಮನ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಎಲ್ಲಾ ರೀತಿಯಲ್ಲೂ ನನಗೆ ವಿಶೇಷವಾಗಿ ಕಂಡಿದೆ. ಇಲ್ಲಿನ ಜನರ ಜ್ಞಾನ ಹಾಗೂ ಸಂಸ್ಕೃತಿ ಎಲ್ಲವೂ ಉತ್ತಮ ಎಂದು ದ.ಕ. ಜಿಲ್ಲೆಯ ನಿರ್ಗಮನ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಹೇಳಿದರು.
ಪಡೀಲ್‌ನ ‘ಪ್ರಜಾಸೌಧ’ದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದ ಸಂದರ್ಭದಲ್ಲಿಯೂ ಲಿಫ್ಟ್‌ನಲ್ಲಿ ಒಬ್ಬರು ತುಳು ಮಾತನಾಡುವುದನ್ನು ಕಂಡಾಗ ನಾನು ಕೂಡಾ ಹೆಮ್ಮೆಯಿಂದ ಅವರಲ್ಲಿ ನಾನು ಕುಡ್ಲದ ಡಿಸಿ ಎಂದು ಪರಿಚಯಿಸಿಕೊಂಡೆ. ಅಷ್ಟೊಂದು ಇಲ್ಲಿನ ವಾತಾವರಣ ನನ್ನ ಮೇಲೆ ಪರಿಣಾಮ ಬೀರಿದೆ. ತಮ್ಮ ಎರಡು ವರ್ಷಗಳ ಸೇವಾವಧಿಯಲ್ಲಿ ಏಳು ವರ್ಷಗಳಿಂದ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಬಾಕಿ ಇದ್ದ 650 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಪ್ರಾಕೃತಿಕ ವಿಕೋಪ ನಿರ್ವಹಣೆಯ ಅಧಿಕಾರವನ್ನು ಗ್ರಾಮ ಪಂಚಾಯತ್ ಹಾಗೂ ವಾರ್ಡ್ ಮಟ್ಟದ ಅಧಿಕಾರಿಗಳ ಮೂಲಕ ನಿರ್ವಹಿಸುವ ಕಾರ್ಯವೈಖರಿಯನ್ನು ರೂಪಿಸಲಾಗಿದೆ. ಅರಣ್ಯ ಅಧಿಕಾರಿ, ಜಿ.ಪಂ. ಸಿಇಒ ಹಾಗೂ ಪೊಲೀಸ್ ಅಧಿಕಾರಿಗಳ ಜತೆಗೆ ಸಮನ್ವಯತೆಯಿಂದ ಕೆಲಸ ಮಾಡಲು ಸಾಧ್ಯವಾದಂತಹ ವಾತಾವರಣ ಮಂಗಳೂರಿನಲ್ಲಿದ್ದ ಕಾರಣ ಎರಡು ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಿಕೊಂಡು, ಹಲವು ವರ್ಷಗಳ ಕಂದಾಯ ಇಲಾಖೆಯ ಸಮಸ್ಯೆಯನ್ನು ಬಗೆಹರಿಸಿ 10000 ರೈತರಿಗೆ ಹಕ್ಕುಪತ್ರ ವಿತರಿಸಲು ಸಾಧ್ಯವಾಗಿದೆ ಎಂದರು.
ನೂತನ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್, ಮಾಜಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ದನ್, ಸ್ಮಾರ್ಟ್ ಸಿಟಿ ಆಡಳಿತ ನಿರ್ದೇಶಕ ರಾಜು ಸಹಿತ ಹಲವರು ಇದ್ದರು.
ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
‘ಇದು ತುಳುನಾಡ ಪದ್ಧತಿ’
ಬೀಳ್ಕೊಡುಗೆ ಸಮಾರಂಭದಲ್ಲಿ ವೃತ್ತಿಯಲ್ಲಿ ವಾಸ್ತುಶಿಲ್ಪಿಯಾಗಿರುವ ತನ್ನ ಪತ್ನಿಯನ್ನು ಬಲಬದಿಯಲ್ಲಿ ಕೂರಿಸಿಕೊಂಡು ‘ಇದು ತುಳುನಾಡ ಪದ್ಧತಿ’. ಸಾಂಸ್ಕೃತಿಕ, ಶೈಕ್ಷಣಿಕವಾಗಿ ಹಲವು ಸಾಧ್ಯತೆಗಳಿಗೆ ಸಾಮರ್ಥ್ಯ ಹೊಂದಿರುವ ದ.ಕ. ಜಿಲ್ಲೆಯ ಗರಿಮೆಯನ್ನು ಮೇಲೆತ್ತುವ ಕೆಲಸ ಜಿಲ್ಲೆಯ ಜನರಿಂದ ಆಗಬೇಕು. ನನ್ನನ್ನು ಕುಡ್ಲ ಮನೆ ಮಗನಾಗಿ ಸ್ವೀಕರಿಸಿದೆ ಎಂದು ಹಕ್ಕಿನಿಂದ ಹೇಳಬಲ್ಲೆ. ಹಾಗಾಗಿ ಕುಡ್ಲವನ್ನು ನನ್ನಿಂದ ಬಿಟ್ಟುಕೊಡಲಾಗದು ಎಂದು ನಿರ್ಗಮನ ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್ ಹೇಳುತ್ತಾ ತುಳುವಿನ ಬಗೆಗಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.