
ಜನರ ಅಗತ್ಯ ಮೂಲಸೌಕರ್ಯಗಳಿಗೆ ಮೊದಲ ಆದ್ಯತೆ: ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.
ಮಂಗಳೂರು: ದ.ಕ. ಜಿಲ್ಲೆಗೆ ಇದೇ ಮೊದಲ ಬಾರಿಗೆ ಅಧಿಕಾರಿಯಾಗಿ ಬಂದಿದ್ದೇನೆ. ಆರಂಭದಲ್ಲಿಯೇ ದ.ಕ. ಜಿಲ್ಲೆಯ ಜನತೆಯ ಪ್ರೀತಿ, ವಿಶ್ವಾಸ ದೊರಕಿದ್ದು, ಜನರ ಅಗತ್ಯ ಮೂಲಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ದ.ಕ. ಜಿಲ್ಲೆಯ ನೂತನ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದ್ದಾರೆ.
ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ದರ್ಶನ್ ಅವರನ್ನು ಅವರ ಕಚೇರಿಯಲ್ಲಿ ಗುರುವಾರ ಭೇಟಿಯಾದ ಪತ್ರಕರ್ತರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.
ಈಗಾಗಲೇ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ಹಾನಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಹಿಂದಿನ ಪ್ರವಾಹದ ಸಂದರ್ಭ ಆಗಿದ್ದಂತಹ ರಸ್ತೆ ಸಂಪರ್ಕ ಕಡಿತ, ಹಾನಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಗುಡ್ಡಕಾಡು ಪ್ರದೇಶಗಳ ಜನವಸತಿಗಳಲ್ಲಿ ಸಂಭಾವ್ಯ ಅನಾಹುತಗಳ ಬಗ್ಗೆ ಮಾಹಿತಿ ಪಡೆದು ತುರ್ತು ರಕ್ಷಣಾ ಕ್ರಮಗಳಿಗೆ ಕ್ರಮ ವಹಿಸಲಾಗುವುದು. ದ.ಕ. ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ್ ಅವರ ನೇತೃತ್ವದಲ್ಲಿ ಈಗಾಗಲೇ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಒಗಳನ್ನು ಮೇಲುಸ್ತುವಾರಿಯಾಗಿಸಿ ಪ್ರಾಕೃತಿಕ ವಿಕೋಪಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಅದರ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದೇನೆ. ಮುಂದಿನ ನಾಲ್ಕೈದು ದಿನಗಳ ಕಾಲ ಅಷ್ಟಾಗಿ ಮಳೆ ಇರದು ಎಂಬ ಮಾಹಿತಿ ಹವಾಮಾನ ಇಲಾಖೆಯಿಂದ ದೊರಕಿದೆ. ನಂತರ ಬರುವ ಮಳೆಯ ಸಂದರ್ಭ ನಷ್ಟ ಆಗದಂತೆ ಎಲ್ಲ ಇಲಾಖೆಗಳ ಸಮನ್ವಯತೆಯೊಂದಿಗೆ ಯಾವ ರೀತಿಯಲ್ಲಿ ಸಮಸ್ಯೆ ಬಗೆಹರಿಸಬಹುದು ಎಂಬ ಬಗ್ಗೆ ಗಮನ ಹರಿಸಲಾಗುವುದು ಎಂದರು.
ಅಕ್ರಮ ಮರಳುಗಾರಿಕೆಗೆ ಕಡಿವಾಣ:
ಅಕ್ರಮ ಮರಳುಗಾರಿಕೆ ತಡೆಯುವುದು ಪ್ರಮುಖ ಆದ್ಯತೆ ಪೊಲೀಸ್ ಅಧಿಕಾರಿಗಳ ಜತೆಗೆ ಜಿಲ್ಲಾಧಿಕಾರಿಯಾಗಿ ನನಗೂ ಇದೆ. ಅದರ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕೆನ್ನುವ ಬಗ್ಗೆ ಶೀಘ್ರವಾಗಿ ಚರ್ಚಿಸಲಾಗುವುದು. ಸಾಗರದಲ್ಲಿ ಉಪ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಅಲ್ಲಿಯೂ ಕೆಲವೊಂದು ಮರಳು ಸಂಬಂಧಿ ವಿಷಯಗಳ ಬಗ್ಗೆ ಕಾರ್ಯ ನಿರ್ವಹಿಸಿದ್ದೇನೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಈ ಬಗ್ಗೆ ಸೂಕ್ತ ನಿರ್ಧರಿಸಲಾಗುವುದು. ಅಕ್ರಮ ಮರಳುಗಾರಿಕೆ ತಡೆಯುವುದು ಪ್ರಮುಖ ಆದ್ಯತೆ ಪೊಲೀಸ್ ಅಧಿಕಾರಿಗಳ ಜತೆಗೆ ಜಿಲ್ಲಾಧಿಕಾರಿಯಾಗಿ ನನಗೂ ಇದೆ. ಅದರ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕೆನ್ನುವ ಬಗ್ಗೆ ಶೀಘ್ರವಾಗಿ ಚರ್ಚಿಸಲಾಗುವುದು ಎಂದರು.
ಶಾಂತಿಯಿದ್ದರೆ ಅಭಿವೃದ್ಧಿಗೆ ಪೂರಕ:
ಕೋಮು ಸೂಕ್ಷ್ಮವಾಗಿ ಗುರುತಿಸಿಕೊಡಿರುವ ದ.ಕ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಣೆಯ ದೂರದೃಷ್ಟಿ ಹೇಗಿರುತ್ತದೆ ಎಂಬ ಪ್ರಶ್ನೆಗೆ ಪ್ರತಿಯಿಕ್ರಿಯಿಸಿದ ಅವರು, ಈಗಷ್ಟೇ ಬಂದಿದ್ದೇನೆ. ಈ ಸಮಯದಲ್ಲಿ ಆ ಬಗ್ಗೆ ನಾನು ಏನೂ ಹೇಳಲಾಗದು. ಆದರೂ ಈಗಾಗಲೇ ಜಿಲ್ಲೆಯಲ್ಲಿ ಪೊಲೀಸ್ ಕಮಿಷನರ್, ಎಸ್ಪಿಯವರು ಈಗಾಗಲೇ ಜಿಲ್ಲೆಯಲ್ಲಿ ಅಗತ್ಯ ಕ್ರಮ ವಹಿಸಿದ್ದಾರೆ. ಕೆಲ ಸಮಯದ ಹಿಂದೆ ಜಿಲ್ಲೆಯಲ್ಲಿ ಇದ್ದ ಪರಿಸ್ಥಿತಿ ಈಗಿಲ್ಲ. ಇದೇ ರೀತಿಯ ಶಾಂತಿಯ ವಾತಾವರಣವನ್ನು ನಾವು ಕಾಪಾಡಿಕೊಂಡು ಬಂದಲ್ಲಿ ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ. ಈ ರೀತಿಯ ಶಾಂತಿಯುತ ಪರಿಸ್ಥಿತಿಯನ್ನು ಮುಂದುವರಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದರು.
15 ನಿಮಿಷದಲ್ಲಿ ಬಂದ 25ಕ್ಕೂ ಅಧಿಕ ಕರೆ!
ನೂತನ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಬುಧವಾರ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಜಿಲ್ಲಾಧಿಕಾರಿಯ ಅಧಿಕೃತ ಮೊಬೈಲ್ ನಂಬರ್‌ಗೆ 15 ನಿಮಿಷದಲ್ಲಿ ಬಂದ 25ಕ್ಕೂ ಅಧಿಕ ಕರೆ, ಸಂದೇಶಗಳಲ್ಲಿ ವ್ಯಕ್ತವಾದ ಮಾತುಗಳು, ಅಭಿಮಾನದ ನುಡಿಗಳು ಮುಲ್ಲೈ ಮುಗಿಲನ್‌ವವರ ಜನಸ್ನೇಹಿ ನಡೆಯನ್ನು ಪರಿಚಯಿಸಿದೆ. ಇದು ನನಗೆ ದೊರಕಿದ ಮೊದಲ ಪಾಠವಾಗಿದ್ದು, ಅವರ ಹೆಜ್ಜೆ ಗುರುತುಗಳನ್ನು ಪಾಲಿಸುವ ಪ್ರಯತ್ನದ ಜತೆಗೆ ಅವರ ತಾಳ್ಮೆ, ಸೂಕ್ಷ್ಮತೆಯನ್ನು ಮೈಗೂಡಿಸಿಕೊಂಡು ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದಾಗಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದರು.