
ಗಾಯಕಿ, ಕಲಾವಿದೆ ಅಖಿಲಾ ಪಜಿಮಣ್ಣು ಪತಿ ಧನಂಜಯ್ ಶರ್ಮಾ ಜೊತೆಗಿನ ತನ್ನ ಬಾಳ ಪಯಣಕ್ಕೆ ಬ್ರೇಕ್
ಮಂಗಳೂರು: ಗಾಯಕಿ, ಕಲಾವಿದೆ ಅಖಿಲಾ ಪಜಿಮಣ್ಣು ತನ್ನ ಪತಿ ಧನಂಜಯ್ ಶರ್ಮಾ ಜೊತೆಗಿನ ತನ್ನ ಬಾಳ ಪಯಣಕ್ಕೆ ಬ್ರೇಕ್ ಹಾಕಿದ್ದಾರೆ. ಮೂರು ವರ್ಷಗಳ ಹಿಂದೆ ಅಮೇರಿಕಾದಲ್ಲಿ ಇಂಜಿನಿಯರ್ ಆಗಿರುವ ಧನಂಜಯ್ ಶರ್ಮಾ ಜೊತೆಗೆ ಸಪ್ತಪದಿ ತುಳಿದಿದ್ದ ಅಖಿಲಾ ಇದೀಗ ಏಕಾಏಕಿ ವಿವಾಹ ವಿಚ್ಛೇಧನಕ್ಕೆ ಮುಂದಾಗಿರುವುದು ಅವರ ಅಭಿಮಾನಿಗಳಿಗೆ ಆಶ್ಚರ್ಯ ಮೂಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೈತಾಡಿ ಸಮೀಪದ ಪಜಿಮಣ್ಣು ನಿವಾಸಿಯಾಗಿರುವ ಅಖಿಲಾ ತನ್ನ ಅದ್ಭುತ ಕಂಠದ ಮೂಲಕ ಮನೆ ಮಾತಾಗಿದ್ದರು. ಅಲ್ಲದೆ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಅಖಿಲಾ ಮೂರು ವರ್ಷಗಳ ಹಿಂದೆ ಧನಂಜಯ್ ಜೊತೆ ವಿವಾಹವಾಗಿದ್ದರು. ಹಲವು ಸಂಗೀತ ರಿಯಾಲಿಟಿ ಶೋಗಳಲ್ಲಿ ವಿಜೇತೆಯಾಗಿರುವ ಈಕೆ ಇತ್ತೀಚಿನ ದಿನಗಳಲ್ಲಿ ತನ್ನ ಸುಮಧುರ ಕಂಠದ ಮೂಲಕ ಗುರುತಿಸಿಕೊಂಡಿದ್ದರು. ಇದೀಗ ತನ್ನ ಪತಿಯೊಂದಿಗಿನ ಮನಸ್ತಾಪದಿಂದ ಈಕೆ ವಿವಾಹ ವಿಚ್ಛೇಧನಕ್ಕೆ ಮುಂದಾಗಿದ್ದಾರೆ ಎನ್ನುವ ಮಾತು ಕೇಳಿ ಬರಲಾರಂಭಿಸಿದೆ. ವಿವಾಹ ವಿಚ್ಛೇಧನ ಅರ್ಜಿಯನ್ನು ಪುತ್ತೂರು ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಖಿಲಾ ದಂಪತಿ ಪರಸ್ಪರ ಸಹಮತದೊಂದಿಗೆ ವಿಚ್ಛೇಧನಕ್ಕೆ ಮುಂದಾಗಿದ್ದಾರೆ. ಪುತ್ತೂರಿನ ಖ್ಯಾತ ವಕೀಲರಾಗಿರುವ ಮಹೇಶ್ ಕಜೆ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು, ಜೂನ್ 12 ಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಕಳೆದ ಒಂದು ವಾರದಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲಾ ಪ್ರಕ್ರಿಯೆಯನ್ನು ಅತ್ಯಂತ ಗುಪ್ತವಾಗಿ ಮಾಡಲಾಗಿತ್ತು.
ಇಂದು ಪುತ್ತೂರು ನ್ಯಾಯಾಲಯದಲ್ಲಿ ಅರ್ಜಿಗೆ ಸಂಬಂಧಿಸಿದಂತೆ ಎರಡನೇ ಹಿಯರಿಂಗ್ ನಡೆದಿದ್ದು, ದಂಪತಿಗಳ ಪರವಾಗಿ ವಕೀಲರೇ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ನ್ಯಾಯಾಲಯವು ಅರ್ಜಿದಾರರಿಗೆ ವಿವಾಹ ವಿಚ್ಛೇಧನ ಪ್ರಕ್ರಿಯೆಯಲ್ಲಿ ನಡೆಯುವಂತೆ ಕಾಲಾವಕಾಶವನ್ನು ನೀಡಿದೆ ಎಂದು ಮೂಲಗಳು ತಿಳಿಸಿದೆ.