
ಮಧ್ಯರಾತ್ರಿ ಪೊಲೀಸ್ ಕಿರುಕುಳ: ದ.ಕ. ಜಿಲ್ಲಾ ಎಸ್ಪಿಗೆ ನೋಟಿಸ್
ಮಂಗಳೂರು: ಮಧ್ಯರಾತ್ರಿ ಮನೆಗೆ ಆಗಮಿಸಿ ಆರೋಪಿಯ ರೀತಿಯಲ್ಲಿ ಫೋಟೋ ತೆಗೆಸಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಉಪ್ಪಿನಂಗಡಿಯ ಹಿರಿಯ ನಾಗರಿಕ ಯು.ಜಿ.ರಾಧಾ ಸಲ್ಲಿಸಿದ ದೂರನ್ನು ಹೈಕೋರ್ಟ್ ವಿಚಾರಣೆಗೆ ಎತ್ತಿಕೊಂಡಿದೆ. ಅಲ್ಲದೆ ಈ ಬಗ್ಗೆ ದಾಖಲೆ ಸಮೇತ ಉತ್ತರಿಸಬೇಕು. ಕಾನೂನು ಹೊರತಾಗಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ತಾಕೀತು ಮಾಡಿದೆ. ಈಗಾಗಲೇ ಪುತ್ತೂರಿನ ಹಿರಿಯ ನಾಗರಿಕ ಯು.ಪೂವಪ್ಪ ಅವರ ಮನೆಗೆ ಮಿಡ್‌ನೈಡ್ ರೈಡ್‌ಗೆ ಸಂಬಂಧಿಸಿ ದೂರಿನ ಮೇರೆಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಾಗೂ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಜಿಲ್ಲಾ ಎಸ್ಪಿಗೆ ನೋಟಿಸ್ ಜಾರಿಗೊಳಿಸಿದೆ.
ಜೂನ್ 1 ರಂದು ಯು.ಜಿ.ರಾಧಾ ಅವರು ಉಪ್ಪಿನಂಗಡಿ ಪೇಟೆಯ ಮೆಡಿಕಲ್ ಶಾಪ್‌ನಲ್ಲಿದ್ದಾಗ ಪೊಲೀಸರು ಮೆಡಿಕಲ್ ಟೆಸ್ಟ್‌ಗೆ ಬಂದಿದ್ದರು. ಮರುದಿನ ಮಧ್ಯರಾತ್ರಿ ಅವರ ಮನೆಗೆ ತೆರಳಿದ ಪೊಲೀಸರು ಅವರ ಫೋಟೋ ತೆಗೆದು ಜಿಪಿಎಸ್ ಮೂಲಕ ಅಪ್‌ಲೋಡ್ ಮಾಡಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಎಸ್ಪಿಯ ಸೂಚನೆ ಇದೆ ಎಂದು ಪೊಲೀಸರು ತಿಳಿಸಿದ್ದರು.
ಪೊಲೀಸರ ಈ ಕ್ರಮದ ವಿರುದ್ಧ ಜೂ.3 ರಂದು ಯು.ಜಿ. ರಾಧಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಪೊಲೀಸರು ವಿನಾ ಕಾರಣ ಕಸಿದಿದ್ದಾರೆ. ಆರೋಪಿಯ ರೀತಿ ನನ್ನನ್ನು ಪೊಲೀಸರು ನಡೆಸಿಕೊಂಡಿದ್ದು, ಇದರಿಂದ ನನ್ನ ಖಾಸಗಿತನ, ಚಾರಿತ್ರ್ಯಕ್ಕೆ ಧಕ್ಕೆಯಾಗಿದೆ. ಈ ಮೂಲಕ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ. ಹೀಗಾಗಿ ನನಗೆ 200 ಲಕ್ಷ ರೂ. ಮಾನನಷ್ಟ ಪರಿಹಾರ ನೀಡುವಂತೆ ಯು.ಜಿ.ರಾಧಾ ಹೈಕೋರ್ಟ್ಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಗುರುವಾರ ಪ್ರಕರಣ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್‌ದತ್ ಯಾದವ್ ಅವರ ಏಕಸದಸ್ಯ ಪೀಠ, ದೂರುದಾರರಿಗೆ ಪ್ರಕರಣ ವಿಚಾರಣೆಯಲ್ಲಿರುವುದರಿಂದ ಯಾವುದೇ ಕಿರುಕುಳವನ್ನು ಪೊಲೀಸರು ನೀಡಬಾರದು. ದೂರುದಾರರ ಮನೆಗೆ ಪೊಲೀಸರು ಆಗಮಿಸಿದ ವಿದ್ಯಮಾನಕ್ಕೆ ಸಂಬಂಧಿಸಿ ಯಾವ ಆಧಾರದಲ್ಲಿ ಫೋಟೋ ತೆಗೆಯಲಾಗಿದೆ ಎಂಬ ಬಗ್ಗೆ ದಾಖಲೆ
ಸಲ್ಲಿಸಬೇಕು ಎಂದು ಎಸ್ಪಿ, ಉಪ್ಪಿನಂಗಡಿ ಠಾಣಾ ಇನ್ಸ್ಪೆಕ್ಟರ್ ಸಹಿತ ರಾಜ್ಯ ಸರ್ಕಾರ, ಪೊಲೀಸ್ ಮಹಾನಿರ್ದೇಶಕರಿಗೂ ನೋಟಿಸ್ ನೀಡಲಾಗಿದೆ. ದೂರುದಾರರ ಪರವಾಗಿ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಿದ್ದರು.
ಯು.ಜಿ. ರಾಧಾ ಅವರು ಕೂಡ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಪ್ರತ್ಯೇಕ ದೂರು ಸಲ್ಲಿಸಿದ್ದರು.