
ಯಕ್ಷಗಾನ ಯುವಮನಸುಗಳಿಗೂ ಆಪ್ತವಾಗಲು ಪಟ್ಲರ ಶ್ರಮ ಕಾರಣ: ನಾಡೋಜ ಜಿ.ಶಂಕರ್
ಮಂಗಳೂರು: ಕಳೆದ 10 ವರ್ಷಗಳಿಂದ ಪಟ್ಲ ಫೌಂಡೇಶನ್ ಟ್ರಸ್ಟ್ ಜನಮೆಚ್ಚಿದ ಕೆಲಸವನ್ನು ಮಾಡುತ್ತ ಬಂದಿದೆ. ಈಗಿನ ಪೀಳಿಗೆ ಯಕ್ಷಗಾನ ಕಲೆಯ ಬಗ್ಗೆ ಅಷ್ಟಾಗಿ ಅಭಿರುಚಿಯನ್ನು ಹೊಂದಿಲ್ಲ. ಆದರೆ ಪಟ್ಲರ ಕಾರ್ಯ ಸಾಧನೆಯಿಂದ ಯಕ್ಷಗಾನ ಇಂದು ಯುವ ಮನಸುಗಳಿಗೂ ಆಪ್ತವಾಗಿದೆ. ಉಡುಪಿಯಲ್ಲೂ ನಮ್ಮ ಟ್ರಸ್ಟ್ ಪಟ್ಲರ ಜೊತೆಗೆ ಕೈಜೋಡಿಸಲಿದೆ. ಇದೊಂದು ಒಳ್ಳೆಯ ಕಾರ್ಯಕ್ರಮ. ಪಟ್ಲರ ಜೊತೆಗೆ ಎಲ್ಲರೂ ಒಗ್ಗಟ್ಟಾಗಿ ದುಡಿದಾಗ ಕಲಾವಿದರ ಬದುಕು ಹಸನಾಗುತ್ತದೆ ಎಂದು ನಾಡೋಜ ಜಿ.ಶಂಕರ್ ಹೇಳಿದರು.
ಅವರು ಇಂದು ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ದಶಮ ಸಂಭ್ರಮ ಕಾರ್ಯಕ್ರಮದ ರಾಷ್ಟ್ರೀಯ ಕಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ‘ಯಕ್ಷಗಾನ ಮಲೆನಾಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯುನ್ನತ ಕಲೆ. ನಮ್ಮ ಕ್ಷೇತ್ರದ ಮಕ್ಕಳಿಗೆ ಯಕ್ಷಗಾನ ಕಲಿಸುತ್ತಿರುವ ಪಟ್ಲ ಸತೀಶ್ ಶೆಟ್ಟಿಯವರು ಅಭಿನಂದನಾರ್ಹರು. ಇಂತಹ ಕಾರ್ಯಕ್ಕೆ ನಾವೆಲ್ಲರೂ ಬೆಂಬಲ ನೀಡಬೇಕಿದೆ’ ಎಂದರು.
ಆದಿತ್ಯ ಕಿಮ್ಮನೆ, ಮಂಗಳೂರು ಕುಲಪತಿ ಪ್ರೊ.ಕೆ.ಎಲ್.ಧರ್ಮ, ರಾಜೇಶ್ ಕಾರಂತ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ದಶಮ ಸಂಭ್ರಮದ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡ ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾ ಗೌರವ-2025 ಅನ್ನು ಅಲಂಗಾರು ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಈಶ್ವರ ಭಟ್, ಮಂಗಳೂರು ವಿವಿ ಮಾಜಿ ಕುಲಪತಿ ಪ್ರೊ. ಬಿ.ಎ. ವಿವೇಕ್ ರೈ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ನಿವೃತ್ತ ಯೋಧ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ಸುಳ್ಯ ಇದರ ಜೀವನ್ ರಾಮ್ ಸುಳ್ಯ ಅವರಿಗೆ ಪ್ರದಾನ ಮಾಡಲಾಯಿತು. ಸಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.