ಡೆಂಘೀ ಪ್ರಕರಣ ಏರಿಕೆ: ಕರು ಸೊಳ್ಳೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಡಾ.ಎಚ್.ಆರ್. ತಿಮ್ಮಯ್ಯ

ಡೆಂಘೀ ಪ್ರಕರಣ ಏರಿಕೆ: ಕರು ಸೊಳ್ಳೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಡಾ.ಎಚ್.ಆರ್. ತಿಮ್ಮಯ್ಯ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಆರಂಭವಾದಾಗಿನಿಂದ ಡೆಂಘೀ ಪ್ರಕರಣ ಏರಿಕೆಯಾಗಿದ್ದು, ಸಾರ್ವಜನಿಕರು ಸೊಳ್ಳೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ 10 ಡೆಂಘೀ ಪ್ರಕರಣಗಳು ಖಚಿತವಾಗಿದ್ದು, ಶಂಕಿತ ಡೆಂಘೀ ಸೋಂಕು ಹರಡುತ್ತಿರುವುದು ಕಂಡುಬಂದಿದೆ. ಬೆಳ್ತಂಗಡಿ, ಸುಳ್ಯ, ಬಂಟ್ವಾಳ ತಾಲೂಕುಗಳಲ್ಲಿ ಸೋಂಕು ಏರುಗತಿಯಲ್ಲಿದೆ ಎಂದು ತಿಳಿಸಿದರು.

ಈ ವರ್ಷ 43 ಖಚಿತ ಡೆಂಘೀ:

ಈ ವರ್ಷ ಜನವರಿಯಿಂದ ಮೇ ತಿಂಗಳವರೆಗೆ ದಕ್ಷಿಣ ಕನ್ನಡದಲ್ಲಿ 43 ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 534 ಪ್ರಕರಣಗಳು ದೃಢಪಟ್ಟಿದ್ದವು ಎಂದು ಹೇಳಿದ ಡಾ.ತಿಮ್ಮಯ್ಯ, ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿದು ಅಲ್ಲಲ್ಲಿ ನೀರು ಸಂಗ್ರಹವಾಗುತ್ತಿರುವುದರಿಂದ ಅಧಿಕ ಪ್ರಮಾಣದಲ್ಲಿ ಡೆಂಘೀ ಪ್ರಕರಣಗಳು ಕಾಣಿಸಿಕೊಳ್ಳಲು ಆರಂಭವಾಗಿದೆ. ನಿರ್ಲಕ್ಷ್ಯ ವಹಿಸಿದರೆ ಪ್ರಾಣಾಪಾಯ ತರಬಹುದಾದ ಈ ಜ್ವರ ನಿಯಂತ್ರಣದ ಕುರಿತು ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.

ಪ್ರತಿ ಶುಕ್ರವಾರ ಡ್ರೈ ಡೇ:

ಸೊಳ್ಳೆ ಉತ್ಪತ್ತಿಯನ್ನು ನಿಯಂತ್ರಿಸುವ ಸಲುವಾಗಿ ಪ್ರತಿ ಶುಕ್ರವಾರ ಡ್ರೈ ಡೇ ಆಚರಿಸಲಾಗುತ್ತಿದೆ. ಅಂದು ಸಾರ್ವಜನಿಕರು ತಮ್ಮ ಮನೆಯಲ್ಲಿರುವ ನೀರು ಶೇಖರಣಾ ತೊಟ್ಟಿಗಳು, ಬ್ಯಾರಲ್, ಡ್ರಮ್‌ಗಳಲ್ಲಿನ ನೀರನ್ನು ಖಾಲಿ ಮಾಡಿ, ತಿಕ್ಕಿ ತೊಳೆದು, ಸ್ವಚ್ಛಗೊಳಿಸಿ ಪುನಃ ನೀರು ತುಂಬಿಸುವುದು ಮತ್ತು ಎಲ್ಲ ನೀರಿನ ಶೇಖರಣೆಗಳನ್ನು ಮುಚ್ಚಿಡುವುದು ಇತ್ಯಾದಿ ಕೆಲಸಗಳನ್ನು ಮಾಡಿ ಸಹಕರಿಸಬೇಕು ಎಂದರು.

ರಬ್ಬರ್ ಬೆಳೆಗಾರರೇ ಎಚ್ಚರ:

ರಬ್ಬರ್ ತೋಟ ಹೆಚ್ಚಿರುವ ಕಡೆಗಳಲ್ಲಿ ಡೆಂಘೀ ಸೋಂಕಿನ ಪ್ರಮಾಣ ಹೆಚ್ಚಳವಾಗುವ ಅಪಾಯವಿದೆ. ಬೆಳೆಗಾರರು ರಬ್ಬರ್ ಸಂಗ್ರಹಿಸುವ ಚಿಪ್ಪನ್ನು ಮಗುಚಿ ಹಾಕಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅದೇ ರೀತಿ ಅಡಕೆ ಬೆಳೆಗಾರರು ಕೂಡ ತಮ್ಮ ತೋಟ ವ್ಯಾಪ್ತಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್, ಜಿಲ್ಲಾ ಮಲೇರಿಯಾಧಿಕಾರಿ ಡಾ.ಜೆಸಿಂತಾ ಇದ್ದರು.

ಜ್ವರ ಬಂದರೆ 50 ಮನೆ ಸಮೀಕ್ಷೆ:

ಡೆಂಘೀ ಮತ್ತಿತರ ಜ್ವರವುಳ್ಳ ಸೋಂಕು ಪತ್ತೆಯಾಗುವ ಸ್ಥಳದ ಆಸುಪಾಸಿನ 50 ಮನೆಗಳ ಸಮೀಕ್ಷೆ ನಡೆಸಿ, ತಪಾಸಣೆ, ನೀರಿನ ಸಂಗ್ರಹಣಾ ಮೂಲಗಳನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುತ್ತದೆ. ಅದಕ್ಕಾಗಿ ಜಿಲ್ಲೆಯಲ್ಲಿ ತಂಡಗಳನ್ನು ರಚಿಸಲಾಗಿದೆ. ಡೆಂಘೀ ನಿರ್ಮೂಲನೆ ಕೇವಲ ಆರೋಗ್ಯ ಇಲಾಖೆ ಕೆಲಸವಲ್ಲ, ಸಾರ್ವಜನಿಕರೂ ಕೈಜೋಡಿಸಬೇಕು. ಸೊಳ್ಳೆಗಳ ಉತ್ಪತ್ತಿ ತಾಣ ನಿರ್ಮೂಲನೆ ಮತ್ತು ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳುವುದೇ ಇದಕ್ಕಿರುವ ಪರಿಹಾರ ಎಂದು ಡಾ.ಎಚ್.ಆರ್. ತಿಮ್ಮಯ್ಯ ಮನವಿ ಮಾಡಿದರು.

ಸ್ವಯಂ ಚಿಕಿತ್ಸೆ ಬೇಡ, ವೈದ್ಯರ ಭೇಟಿ ಅಗತ್ಯ:

ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ ಡೆಂಘೀ ಜ್ವರದ ಲಕ್ಷಣ. ಯಾವುದೇ ಜ್ವರ ಬಂದರೂ ಸ್ವಯಂ ಚಿಕಿತ್ಸೆ ಅಥವಾ ಮನೆಮದ್ದು ಮಾಡಬಾರದು. ವೈದ್ಯರು ಅಥವಾ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ. ಜ್ವರ, ಮೈಕೈ ನೋವು ಸಂದರ್ಭ ವೈದ್ಯಕೀಯ ತಪಾಸಣೆ ಮಾಡದೆ ನೋವು ನಿವಾರಕ ಮಾತ್ರೆ ಸೇವಿಸುವುದು ಅನಾಹುತಕ್ಕೆ ಅವಕಾಶ ಒದಗಿಸಬಹುದು. ಡೆಂಘೀ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯ ಪ್ಲೇಟ್‌ಲೆಟ್ ಪ್ರಮಾಣ ಕಡಿಮೆಯಾಗುತ್ತದೆ. ಇಂತಹ ವ್ಯಕ್ತಿ ನೋವು ನಿವಾರಕ ಔಷಧಿ ಸೇವಿಸಿದರೆ ಪ್ಲೇಟ್‌ಲೆಟ್ ಮತ್ತಷ್ಟು ಕುಸಿದು ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎಚ್ಚರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article