ಜಗತ್ತಿಗೆ ಭಾರತ ನೀಡಿದ ಕೊಡುಗೆ ಯೋಗ: ಕ್ಯಾ. ಬ್ರಿಜೇಶ್ ಚೌಟ

ಜಗತ್ತಿಗೆ ಭಾರತ ನೀಡಿದ ಕೊಡುಗೆ ಯೋಗ: ಕ್ಯಾ. ಬ್ರಿಜೇಶ್ ಚೌಟ


ಮಂಗಳೂರು: ಯೋಗವು ಇಡೀ ಜಗತ್ತಿನ ಮನುಕುಲಕ್ಕೆ ಭಾರತ ನೀಡಿದ ಶ್ರೇಷ್ಠವಾದ ಕೊಡುಗೆಯಾಗಿದೆ ಎಂದು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಇವರ ಆಶ್ರಯದಲ್ಲಿ ಆಯುಷ್ ಮಹಾವಿದ್ಯಾಲಯಗಳು ಹಾಗೂ ವಿವಿಧ ಯೋಗ ಸಂಘಟನೆಗಳ ಸಹಕಾರದೊಂದಿಗೆ ಶನಿವಾರ ನಗರದ ಪುರಭವನದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಜೀವನ ಪದ್ಧತಿಗೆ ಯೋಗವು ಅತ್ಯುತ್ತಮವಾದ ಸಾಧನವಾಗಿದೆ. ಇಂದು ವಿಶ್ವದ ಎಲ್ಲಾ ಕಡೆಗಳಲ್ಲಿ ಯೋಗ ದಿನಾಚರಣೆ ಮಾಡಲಾಗುತ್ತಿದ್ದು, ಇದು ಜಗತ್ತು ಭಾರತದ ಸಂಸ್ಕೃತಿಗೆ ಕೊಟ್ಟಿರುವ ಗೌರವವಾಗಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಮಾತನಾಡಿ, ಯೋಗ ದಿನ ಭಾರತಕ್ಕೆ ಮಾತ್ರ ಸೀಮಿತವಾಗದೆ 160ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ. ಯೋಗವು ಕೇವಲ ತೋರಿಕೆಗೆ ಸೀಮಿತವಾಗದೆ ನಮ್ಮ ಜೀವನ ಶೈಲಿಯ ಭಾಗವಾಗಬೇಕು. ಪ್ರತಿಯೊಬ್ಬರೂ ಯೋಗವನ್ನು ನಡೆಸಿ ತಮ್ಮ ಜೀವನ ಪದ್ಧತಿ ಉತ್ತಮಗೊಳಿಸಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ವೈ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ., ಯುವ ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿ ಪ್ರದೀಪ್ ಡಿಸೋಜಾ, ಲೇಡಿಗೋಷನ್ ಅಧೀಕ್ಷಕ ದುರ್ಗಪ್ರಸಾದ್, ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರು. ನಿವೃತ್ತ ಆಯುಷ್ ಅಧಿಕಾರಿ ಡಾ. ದೇವದಾಸ್ ನಿರೂಪಿಸಿದರು. ನಂತರ ಪುರಭವನದಲ್ಲಿ  ಸಾಮೂಹಿಕ ಯೋಗಾಭ್ಯಾಸ ನಡೆಯಿತು. ಯೋಗಗುರು ಡಾ. ಗೋಪಾಲಕೃಷ್ಣ ದೇಲಂಪಾಡಿ ಕಾರ್ಯಕ್ರಮದ ನೇತೃತ್ವ ವಹಿಸಿ ಸುಮಾರು 1 ಗಂಟೆಗಳ ಕಾಲ ಯೋಗ ನೆರವೇರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article