ಹಿಂದು ನಾಯಕರ ಮೇಲೆ ಅನಗತ್ಯವಾಗಿ ಎಫ್.ಐ.ಆರ್. ದಾಖಲು: ಸತೀಶ್ ಕುಂಪಲ

ಹಿಂದು ನಾಯಕರ ಮೇಲೆ ಅನಗತ್ಯವಾಗಿ ಎಫ್.ಐ.ಆರ್. ದಾಖಲು: ಸತೀಶ್ ಕುಂಪಲ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಶಾಂತಿ ಸಾಮರಸ್ಯವನ್ನು ಕದಡುವ ಘಟನೆಗಳು ಪದೇಪದೇ ಮರುಕಳಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಠೀಕರಣ ದೋರಣೆಯಿಂದ ಹಿಂದುಗಳು ಭವಣೆ ಪಡುವಂತಾಗಿದೆ. ಇದೀಗ ರಾಷ್ಟ್ರಭಕ್ತ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಕಲ್ಲಡ್ಕ ಪ್ರಭಾಕರ ಭಟ್ಟ ಅವರ ಮೇಲೆ ಎಫ್‌ಐಆರ್ ದಾಖಲು, ಹಿಂದು ನಾಯಕರನ್ನು ಗುರುತಿಸಿ ಗಡಿಪಾರು ಮಾಡಲು ಹೊರಟಿರುವುದು, ವಿಚಾರಣೆ ನೆಪದಲ್ಲಿ ಹಿಂದುತ್ವಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರ ಮನೆಗೆ ರಾತ್ರಿ ಹೊತ್ತಲ್ಲಿ ಪೊಲೀಸರು ಬರುತ್ತಿರುವುದು ಜಿಲ್ಲೆಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿಕೆ ಮಾಡಿರುವಂತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಮುಸ್ಲಿಂ ಒಲೈಕೆ, ಹಿಂದು ನಾಯಕರ ಮೇಲಿನ ಎಫ್‌ಐಆರ್ ಗಡೀಪಾರು ಕ್ರಮಗಳನ್ನು ಭಾರತೀಯ ಜನತಾ ಪಾರ್ಟಿ ಅತ್ಯುಗ್ರವಾಗಿ ಖಂಡಿಸುತ್ತದೆ. ಅನಗತ್ಯವಾಗಿ ಎಫ್‌ಐಆರ್ ದಾಖಲಿಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಪದಾಧಿಕಾರಿಗಳು, ಶಾಸಕರುಗಳ ನಿಯೋಗ ಪೊಲೀಸ್ ವರಿಷ್ಠಾಧಿಕಾರಿಗಳನ್ನುಭೇಟಿ ಮಾಡಿ ಹಿಂದುತ್ವಕ್ಕಾಗಿ ದುಡಿಯುತ್ತಿರುವವರನ್ನು ಕ್ರಿಮಿನಲ್ ರೀತಿ ಬಿಂಬಿಸುವುದರ ಬಗ್ಗೆ ಅಸಮಾಧಾನವನ್ನು ವ್ಯಕ್ತ ಪಡಿಸಲಾಯಿತು. ಇಲಾಖೆಯು ಆಡಳಿತ ಪಕ್ಷದ ನಿರ್ದೇಶನಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿದರೆ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಸ್ಥಾಪನೆಗೆ ಬಿ.ಜೆ.ಪಿ. ಸದಾ ಸಹಕರಿಸಲಿದೆ ಎಂದು ಕುಂಪಲ ಹೇಳಿದರು.

ಅಮಾಯಕರನ್ನು ಮಾನಸಿಕವಾಗಿ ಹಿಂಸಿಸುವುದನ್ನು, ಸಂಘ ಪರಿವಾರದ ಕಾರ್ಯಕರ್ತರ ಮನೋ ಬಲವನ್ನು ಕುಗ್ಗಿಸಲು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸದಿದ್ದರೆ ಹೋರಾಟ ಅನಿವಾರ್ಯವಾಗಲಿದೆ. ಅಮಾಯಕರು, ಸಂಘ ಪರಿವಾರದ ಕಾರ್ಯಕರ್ತರ ಜತೆಯಲ್ಲಿ ಪಕ್ಷ ಸದಾ ಇರಲಿದೆ. ಎಂದು ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article