
ಕಾಂಗ್ರೆಸ್ ನಾಯಕರು ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಕಚೇರಿ ರೀತಿ ಬಳಸುತ್ತಿದ್ದಾರೆ: ಶಾಸಕ ಡಾ. ಭರತ್ ಶೆಟ್ಟಿ
ಮಂಗಳೂರು: ಇಬ್ಬರು ಅಧಿಕಾರಿಗಳಿಗೆ ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ಅಧಿಕಾರಿಗಳು ಎಂಬ ಹೆಸರಿದೆ. ಆ ಹೆಸರಿಗೆ ತಕ್ಕಂತೆ ಅವರು ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ದ.ಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅವರಿಗೆ ಬಿಜೆಪಿ ಸಹಕಾರ ನೀಡಲಿದೆ. ಕಾಂಗ್ರೆಸ್ ನಾಯಕರು ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಕಚೇರಿ ರೀತಿ ಬಳಸುತ್ತಿದ್ದಾರೆ. ಇಂಥವುಗಳಿಗೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಹೇಳಿದ್ದೇವೆ. ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲದೇ ತನಿಖೆ ನಡೆಯಲಿ ಎಂದಿದ್ದೇವೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರು ಕಮಿಷನರ್ ಹಾಗೂ ಎಸ್ಪಿ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಂಬರ್ ಟೂ ವ್ಯವಹಾರ, ಗೋ ಹತ್ಯೆ, ಲವ್ ಜಿಹಾದ್, ಡ್ರಗ್ಸ್‌ಗೆ ಕಡಿವಾಣ ಹಾಕಲು ಕೋರಿಕೆ ಇಟ್ಟಿದ್ದೇವೆ. ಎಲ್ಲದಕ್ಕೂ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ನಡುರಾತ್ರಿಯಲ್ಲಿ ಕಾರ್ಯಕರ್ತರ ಮನೆಗೆ ಪೊಲೀಸರು ಹೋಗೋದನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಕೇಸ್ ಇಲ್ಲದ ಹಿರಿಯರ ಮನೆಗಳಿಗೆ ಹೋಗೋದನ್ನು ಒಪ್ಪುವುದಿಲ್ಲ. ಇಂಥದ್ದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಅವರಿಗೆ ಹೇಳಿದ್ದೇವೆ ಎಂದರು.
ಭಾಷಣಗಳ ವಿಚಾರದಲ್ಲಿ ಯಾವುದು ಕೋಮು ಭಾಷಣ, ಯಾವುದು ಅಲ್ಲ ಎಂದು ನೋಡಬೇಕು. ನಮ್ಮ ವಿಷಯ, ಸಮಸ್ಯೆ ಹೇಳಲು ವಾಕ್ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಅದು ತಪ್ಪು, ಸರಿ ಎಂದು ನೋಡಬೇಕು. ರಾಜಕೀಯಕ್ಕಾಗಿ ಸುಳ್ಳು ಕೇಸ್ ಹಾಕಬಾರದು. ಡಾ. ಪ್ರಭಾಕರ ಭಟ್ ಅವರ ಮೇಲೆ ಕೇಸ್ ಹಾಕಲು 20 ದಿನದ ತಯಾರಿ ಆಗಿದೆ. ಆದರೆ ಹೈಕೋರ್ಟ್ ತಡೆ ನೀಡಿದ್ದನ್ನು ಸ್ವಾಗತಿಸುತ್ತೇವೆ ಎಂದರು.
ಗಡೀಪಾರು ಪಟ್ಟಿ ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಮಂತ್ರಿಗಳು ಕೂತು ಮಾಡಿದ ಲಿಸ್ಟ್ ಆಗಿದೆ. ಗಡೀಪಾರು ಮಾಡಲು ಫೈಲ್ ರೆಡಿ ಆಗಬೇಕು, ಅದಕ್ಕೆ ಎರಡು ತಿಂಗಳ ಹಿಂದೆ ಕೆಲಸ ಆಗಿದೆ. ಕಾಂಗ್ರೆಸ್ ನಾಯಕರೇ ಕೂತು ಈ ಗಡೀಪಾರು ಲಿಸ್ಟ್ ಮಾಡಿದ್ದಾರೆ. ಬಹಳ ಹಿಂದೆ ಕೇಸ್ ಇದ್ದವರ ಹೆಸರನ್ನು ಸೇರಿಸಿ ಕಾಂಗ್ರೆಸ್ ರಾಜಕೀಯ ಮಾಡಿದೆ. ಎಸ್ಪಿ ಮತ್ತು ಕಮಿಷನರ್ ನಮ್ಮ ಮನವಿಗೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ಮೀರಿ ಕಿರುಕುಳ ನೀಡುವುದಿಲ್ಲ ಎಂದಿದ್ದಾರೆ. ಹಾಗಾಗಿ ನಾವು ಸದ್ಯ ಕಾದು ನೋಡ್ತೇವೆ, ಅನ್ಯಾಯ ಆದರೆ ನಾವು ಸಹಿಸುವುದಿಲ್ಲ. ಕಾಂಗ್ರೆಸ್ ನಿಯೋಗ ಬರುವುದಾದರೆ ಪೊಲೀಸರು ಯಾಕೆ? ಅವರು ಏನು ವರದಿ ಕೊಡುತ್ತಾರೆ. ಅವರಿಗೆ ಕಾನೂನು ವ್ಯಾಪ್ತಿ ಇಲ್ಲ, ಅವರು ಮುಸ್ಲಿಂ ನಾಯಕರ ಸಮಾಧಾನ ಮಾಡಲು ಬರುತ್ತಿದ್ದಾರೆ ಎಂದರು.
ಒನ್‌ಸೈಡ್ ಕೇಸ್..
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಕಳೆದೊಂದು ತಿಂಗಳ ವಿದ್ಯಮಾನಗಳ ಬಗ್ಗೆ ಅವರ ಜೊತೆ ಚರ್ಚೆ ಮಾಡಿದ್ದೇವೆ. ಹಿಂದೂ ಸಮಾಜದ ಮೇಲೆ ಕಾಂಗ್ರೆಸ್ ಸರ್ಕಾರದ ಜೊತೆ ಸೇರಿ ಮಾಡುವ ದೌರ್ಜನ್ಯ ನಿಲ್ಲಿಸಲು ಆಗ್ರಹಿಸಿದ್ದೇವೆ. ಸದ್ಯ ಇಬ್ಬರು ಅಧಿಕಾರಿಗಳು ಶಾಂತಿ ಕಾಪಾಡಲು ಒಳ್ಳೆಯ ಚಿಂತನೆ ಇಟ್ಟಿದ್ದಾರೆ. ಸರ್ಕಾರದ ಮಾತು ಕೇಳಿ ಕೆಲಸ ಮಾಡುವುದಿಲ್ಲ ಎನ್ನುವ ಭಾವನೆ ನಮಗೆ ಬಂದಿದೆ. ಶಾಂತಿ ಕಾಪಾಡಲು ಜಿಲ್ಲೆಯಲ್ಲಿ ಕೆಲಸ ಮಾಡುತ್ತಾರೆ. ಪ್ರಚೋದನಕಾರಿ ಭಾಷಣಗಳಿಗೆ ಈಗಾಗಲೇ ಎಫ್‌ಐಆರ್ ಆಗಿದೆ. ಆದರೆ ಅದೆಲ್ಲವೂ ಒನ್ ಸೈಡ್ ಆಗಿದೆ, ಹಿಂದೂ ಸಮಾಜದ ಮೇಲೆ ಮಾತ್ರ ಆಗಿದೆ. ಮುಸಲ್ಮಾನರ ಪ್ರಚೋದನೆಗಳಿಗೆ ಯಾವುದೇ ರೀತಿಯ ಎಫ್‌ಐಆರ್ ಆಗಿಲ್ಲ. ಕಾರ್ಯಕರ್ತರು ಮತ್ತು ಹಿರಿಯರ ಮನೆಗೆ ಭೇಟಿ ಕೊಡುವುದನ್ನು ತಕ್ಷಣಕ್ಕೆ ನಿಲ್ಲಿಸಬೇಕು ಎಂದು ಹೇಳಿದ್ದೇವೆ. ಅಪರಾಧ ಹಿನ್ನೆಲೆ ಇಲ್ಲದವರ ಮನೆಗಳಿಗೆ ಹೋಗೋದನ್ನು ಸರಿಯಲ್ಲ ಎಂದಿದ್ದೇವೆ. ನಾವು ಆಗ್ರಹ ಮಾಡಿದ್ದೇವೆ, ಹಾಗಾಗಿ ಅವರ ಗಮನಕ್ಕೆ ತಂದಿದ್ದೇವೆ ಎಂದರು.
ಪ್ರಮುಖ ಮುಸ್ಲಿಮರ ಹೆಸರೇ ಇಲ್ಲ..
ಗಡೀಪಾರು ಪಟ್ಟಿಯಲ್ಲಿ ಇರುವ ವ್ಯಕ್ತಿಗಳಲ್ಲಿ ಮುಸಲ್ಮಾನರ ಹೆಸರುಗಳು ಇವೆ ಎನ್ನುತ್ತಾರೆ. ಆದರೆ ಈ ಪಟ್ಟಿ ಮಾಡಿದ್ದು ಯಾರು? ಯಾವಾಗ ತಯಾರಾಯ್ತು? ಈ ಪಟ್ಟಿಯಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಮುಸಲ್ಮಾನರ ಹೆಸರುಗಳಿಲ್ಲ. ಆದರೆ ಸಮಾಜ ಕಾರ್ಯ ಮಾಡುವ ಹಿಂದೂ ಮುಖಂಡರ ಹೆಸರುಗಳು ಇದೆ. ಮುಸಲ್ಮಾನ ಸಂಘಟನೆ ಪ್ರಮುಖರ ಯಾವುದೇ ಹೆಸರುಗಳು ಇಲ್ಲಿಲ್ಲ. ಕೆಪಿಸಿಸಿ ನಿಯೋಗ ಇಲ್ಲಿಗೆ ಯಾಕೆ ಬರಬೇಕು? ಅವರದ್ದೇ ಸರ್ಕಾರ ಇದೆ. ಜಿಲ್ಲೆಯಲ್ಲಿ ರಾಜಕೀಯ ಮಾಡಲು ಅವರು ಇಲ್ಲಿಗೆ ಬರುತ್ತಿದ್ದಾರೆ. ಮೊದಲು ಅವರ ರಾಜಿನಾಮೆ ನೀಡಿದ ಅಲ್ಪಸಂಖ್ಯಾತರನ್ನು ಸರಿ ಮಾಡಲಿ ಎಂದು ಅವರು ಹೇಳಿದರು.