
ಕೊಲೆಯಲ್ಲಿ ಅಂತ್ಯಗೊಂಡ ಜಗಳ
ಮಂಗಳೂರು: ನಗರದ ಯೆಯ್ಯಡಿಯ ಬಾರ್ ಒಂದರಲ್ಲಿ ಜೂ.7ರಂದು ತಂಡಗಳ ಮಧ್ಯೆ ನಡೆದ ಗಲಾಟೆಯಲ್ಲಿ ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕೌಶಿಕ್ (32) ಎಂಬವರು ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾರೆ.
ಹಳೇ ವೈಷ್ಯಮ್ಯದ ಹಿನ್ನೆಲೆಯಲ್ಲಿ ಮತ್ತೆ ಗಲಾಟೆ ನಡೆದು ಒಬ್ಬರು ಜೀವ ಕಳೆದುಕೊಳ್ಳುವಂತಾಗಿದೆ. ಕದ್ರಿ ಪೊಲೀಸರು ಪ್ರಕರಣದ ಆರೋಪಿಗಳಾದ ಬ್ರಿಜೇಶ್, ಗಣೇಶ್, ನಿತಿನ್ ಕುಮಾರ್ ಮತ್ತು ವಿನೋದ್ ಎಂಬವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಾರಣಾಂತಿಕ ಹಲ್ಲೆ ಈಗ ಕೊಲೆ ಪ್ರಕರಣವಾಗಿ ಬದಲಾಗಿದೆ.
ಆರೋಪಿಗಳು ಮತ್ತು ಸಂತ್ರಸ್ತ ಯುವಕ ಕೌಶಿಕ್ ಎಲ್ಲರೂ ಪರಿಚಯದವರೇ ಆಗಿದ್ದು, ಒಂದು ತಿಂಗಳ ಹಿಂದೆ ಇವರ ನಡುವೆ ಮಾತಿನ ಚಕಮಕಿ ಆಗಿತ್ತು. ಇದರ ಸಿಟ್ಟಿನಲ್ಲಿ ಮೊನ್ನೆ ಯೆಯ್ಯಡಿಯ ಬಾರ್ ನಲ್ಲಿದ್ದಾಗ ಪರಸ್ಪರ ಬೈದಾಡಿಕೊಂಡಿದ್ದರು. ಇದೇ ವೇಳೆ ಬಿಜೈ ನಿವಾಸಿಗಳಾದ ಬ್ರಿಜೇಶ್ ಮತ್ತು ಗಣೇಶ್ ಎಂಬಿಬ್ಬರು ಚೂರಿ ತಂದು ಕೌಶಿಕ್ ಹೊಟ್ಟೆಗೆ ಇರಿದಿದ್ದರು. ಕೂಡಲೇ ಆತನ ಜೊತೆಗಿದ್ದವರು ಕೌಶಿಕ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಬ್ರಿಜೇಶ್ ಮತ್ತು ಕೌಶಿಕ್ ಮಧ್ಯೆ ಹಿಂದೆ ಗಲಾಟೆಯಾಗಿದ್ದು ಅದೇ ದ್ವೇಷದಲ್ಲಿ ಕುಡಿದ ಮತ್ತಿನಲ್ಲಿ ಇರಿತ ಘಟನೆ ನಡೆದಿದೆ. ಕದ್ರಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.