
ಎಕ್ಸ್‌ಪರ್ಟ್‌ನಲ್ಲಿ ಅಂತರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆ
Saturday, June 21, 2025
ಮಂಗಳೂರು: ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‌ಬೈಲ್‌ನಲ್ಲಿ ಅಂತರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಅಂತರಾಷ್ಟ್ರೀಯ ಯೋಗ ತೀರ್ಪುಗಾರ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಮಾತನಾಡಿ, ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಎನ್ನುವ ಧ್ಯೇಯದೊಂದಿಗೆ ಯೋಗವನ್ನು ಸರ್ವರೂ ತಮ್ಮ ಜೀವನದಲ್ಲಿ ಅಭ್ಯಾಸ ಮಾಡಿಕೊಳ್ಳುವ ಮೂಲಕ ಆರೋಗ್ಯವಂತರಾಗಬೇಕು ಎಂದ ಅವರು ವಿದ್ಯಾರ್ಥಿಗಳು ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಮನಸ್ಸನ್ನು ಏಕಾಗ್ರತೆಯಲ್ಲಿಡಲು ಸಾಧ್ಯ. ವಿಚಾರಗಳನ್ನು, ಚಿಂತನೆಗಳನ್ನು ಸುಲಭವಾಗಿ ತಿಳಿಯಲು ಸಹಕಾರಿಯಾಗುತ್ತದೆ. ಯೋಗ ನಮ್ಮ ಶರೀರ-ಮನಸ್ಸುಗಳಲ್ಲಿ ನವಚೈತನ್ಯವನ್ನು ಮೂಡಿಸುತ್ತದೆ. ಆ ನಿಟ್ಟಿನಲ್ಲಿ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ವಿದ್ಯಾರ್ಜನೆಯ ಜೊತೆಗೆ ಪ್ರತಿನಿತ್ಯಯೋಗವನ್ನೂ ಅಭ್ಯಾಸ ಮಾಡಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಯುವ ಸಿತಾರ್ ಕಲಾವಿದರಾದ ಭಾರತ ಮತ್ತು ಅಂತಾರಾಷ್ಟೀಯ ಮಟ್ಟದಲ್ಲಿ ಹಲವಾರು ಯಶಸ್ವಿ ಸಂಗೀತ ಪ್ರದರ್ಶನ ನೀಡಿರುವ, ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನದ ವಿಭಾಗದ ನಿರ್ದೇಶಕ ಅಂಕುಶ್ ಎನ್. ನಾಯಕ್ ಅವರು ಕಾರ್ಯಕ್ರಮದುದ್ದಕ್ಕೂ ಸಿತಾರ ವಾದನವನ್ನು ನುಡಿಸುವ ಮೂಲಕ ವಿಶ್ವ ಸಂಗೀತ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಿದರು. ಯೋಗ ಕಾರ್ಯಕ್ರಮದೊಂದಿಗೆ ಸಿತಾರ್ ವಾದನ ನುಡಿಸುವ ಮೂಲಕ ಹಲವು ರಾಗಗಳನ್ನು ಪ್ರಸ್ತುತಪಡಿಸಿದರು.
ಯೋಗದೊಂದಿಗೆ ಸಂಗೀತದ ಸಮ್ಮಿಲನಗೊಂಡು ಒಂದು ಶಾಂತ ನಿರ್ಮಲ ವಾತಾವರಣವನ್ನು ಸೃಷ್ಟಿಸಿತು. ಯೋಗ ಮತ್ತು ಸಂಗೀತ ಇವೆರಡೂ ನಮ್ಮ ದೇಹ ಮತ್ತು ಮನಸ್ಸುನ್ನು ಸಂತೋಷಗೊಳಿಸುವ, ತೃಪ್ತಿಗೊಳಿಸುವ ಮಾಧ್ಯಮ. ಯೋಗ ಮತ್ತು ಸಂಗೀತದ ಮುಖಾಂತರ ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂದು ಸಿತಾರ್ ವಾದಕ ಅಂಕುಶ್ ಎನ್ ನಾಯಕ್ ಅವರು ಹೇಳಿದರು.
ವೇದಿಕೆಯಲ್ಲಿ ಗೋಪಾಲಕೃಷ್ಣ ದೇಲಂಪಾಡಿ ಹಾಗೂ ಅವರ ಶಿಷ್ಯವೃಂದ ಸಂಸ್ಥೆಯ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಹಲವು ಯೋಗ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು. ಅಂತೆಯೇ ಕಾಲೇಜಿನ ವಿದ್ಯಾರ್ಥಿಗಳು ಯೋಗವನ್ನು ಪ್ರದರ್ಶಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್, ಕಾರ್ಯಕ್ರಮ ಸಂಯೋಜಕಿ ರಮ್ಯ ಅನಿಲ್ ಸೇರಿದಂತೆ ಇತರ ಬೋಧಕ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ಹಿಂದಿ ವಿಭಾಗದ ಉಪನ್ಯಾಸಕ ಪ್ರಮೋದ್ ಕಿಣಿ ಕಾರ್ಯಕ್ರಮ ನಿರೂಪಿಸಿದರು.