
ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ
Saturday, June 21, 2025
ಪುತ್ತೂರು: ವಿದ್ಯಾರ್ಥಿ ಸಂಘವು ಕಾಲೇಜಿನ ಪ್ರಮುಖ ಅಂಗವಾಗಿದ್ದು, ಸಮಾಜಮುಖಿ ಮತ್ತು ವಿದ್ಯಾರ್ಥಿ ಸ್ನೇಹಿ ಕೆಲಸಗಳನ್ನು ಮಾಡುವುದರ ಮೂಲಕ ಮಾದರಿ ಸಂಘಟನೆ ಎನಿಸಿಕೊಳ್ಳಬಲ್ಲುದು ಎಂದು ಪುತ್ತೂರು ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ಇಲ್ಲಿನ ಸಹ ಪ್ರಾಧ್ಯಾಪಕರು ಹಾಗೂ ಎಂ.ಬಿ.ಎ. ವಿಭಾಗದ ನಿರ್ದೇಶಕರಾದ ಡಾ. ರೋಬಿನ್ ಮನೋಹರ್ ಶಿಂಧೆ ಹೇಳಿದರು.
ಅವರು ಜೂ.21 ರಂದು ಕಾಲೇಜು ಸಭಾಂಗಣದಲ್ಲಿ ನಡೆದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿ ಸಂಘಟನೆಯ ಕಾರ್ಯಗಳು ವಿಭಿನ್ನವಾಗಿ ಕಾಣಿಸಿಕೊಳ್ಳಬೇಕಾಗಿದ್ದು, ಸಂಘದ ಪಾದಾಧಿಕಾರಿಗಳಿಗೆ ಸಮಾಜದ ಆಗುಹೋಗುಗಳ ಬಗ್ಗೆ ಜ್ಞಾನವಿರುವುದು ಅತ್ಯಂತ ಅವಶ್ಯಕ. ಇಂದಿನ ಕಂಪ್ಯೂಟರ್ ಯುಗದಲ್ಲಿ ಕೃತಕ ಬುದ್ಧಿಮತ್ತೆ ಸಮಾಜವನ್ನು ನಿಯಂತ್ರಿಸುತ್ತಿದ್ದು, ಇದರ ಉಪಯೋಗ ಮತ್ತು ದುರುಪಯೋಗಗಳ ಬಗ್ಗೆ ವಿದ್ಯಾಥಿಗಳು ತಿಳಿದುಕೊಳ್ಳಬೇಕಾಗಿದೆ. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘವು ಸಮಾಜಮುಖಿ ಕಾರ್ಯಗಳನ್ನು ಮಾಡುವುದರ ಜೊತೆಗೆ ಕಾಲೇಜಿನ 1500 ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿವುದರ ಮೂಲಕ ಮಾದರಿ ಸಂಘವಾಗಲಿ ಎಂದು ಶುಭ ಹಾರೈಸಿದರು.
ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ರೆ. ಫಾ. ಲಾರೆನ್ಸ್ ಮಸ್ಕರೇನಸ್ ಹೂಗುಚ್ಛ ನೀಡಿ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರೆ. ಫಾ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ನಾಯಕನಾದವನು ಇತರರನ್ನು ಉತ್ತೇಜಿಸಬೇಕು. ಜವಾಬ್ದಾರಿಗಳನ್ನು ಹಂಚಿಕೊಂಡು, ತನ್ನ ಸೇವೆಯ ಮೂಲಕ ಇತರರಿಗೆ ಮಾದರಿಯಾಗಬೇಕು. ಯಾವುದೇ ಸಮಸ್ಯೆಗಳು ಬಂದಾಗ ಅದಕ್ಕೆ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಕಾರ್ಯಪ್ರವೃತನಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನೂತನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದೀಪ್ತಿ ಕೆ.ಸಿ., ಕಾರ್ಯದರ್ಶಿ ತೇಜಸ್ ಎ.ಕೆ., ಜೊತೆ ಕಾರ್ಯದರ್ಶಿ ಶ್ರಿಯಾ ಎ. ಜಾನ್ ಸಹಿತ ತರಗತಿವಾರು ಪ್ರತಿನಿಧಿಗಳು, ವಿವಿಧ ಸಂಘಗಳ ಪದಾಧಿಕಾರಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಪ್ರಮಾಣ ವಚನವನ್ನು ಬೋಧಿಸಿದರು.
ಇದೇ ಸಂದರ್ಭದಲ್ಲಿ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರತಿಮಾ ಹೆಗ್ಡೆಯವರನ್ನು ಸನ್ಮಾನಿಸಲಾಯಿತು.
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ.ಕೋಸ್ಟ, ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಹಾಗೂ ಪ.ಪೂ. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ. ಪ್ರಕಾಶ್ ಬಿ. ಹಾಗೂ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರತಿಮಾ ಹೆಗ್ಡೆ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ನೂತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪ್ತಿ ಕೆ.ಸಿ. ಸ್ವಾಗತಿಸಿ, ಕಾರ್ಯದರ್ಶಿ ತೇಜಸ್ ಎ.ಕೆ. ಅತಿಥಿಗಳನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಶ್ರಿಯಾ ಎ. ಜಾನ್ ವಂದಿಸಿ, ವಿದ್ಯಾರ್ಥಿನಿ ಎಂಜಲಿಕ ಮೆಲನಿ ಪಿಂಟೋ ಕಾರ್ಯಕ್ರಮವನ್ನು ನಿರೂಪಿಸಿದರು.