ಹಿಂದೂ ನಾಯಕರನ್ನು ಬೆದರಿಸಲು ಸರ್ಕಾರದಿಂದ ಆಡಳಿತ ಯಂತ್ರದ ದುರ್ಬಳಕೆ: ಕ್ಯಾ. ಬ್ರಿಜೇಶ್ ಚೌಟ

ಹಿಂದೂ ನಾಯಕರನ್ನು ಬೆದರಿಸಲು ಸರ್ಕಾರದಿಂದ ಆಡಳಿತ ಯಂತ್ರದ ದುರ್ಬಳಕೆ: ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಹಿಂದು ಸಂಘಟನೆಗಳ 15 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಮತ್ತೊಮ್ಮೆ ನಮ್ಮ ಕರಾವಳಿ ಭಾಗದ ಹಿಂದೂ ನಾಯಕರು ಮತ್ತು ಸಂಘಟನೆಗಳನ್ನು ಬೆದರಿಸಲು, ವಿಭಜಿಸಲು ಹಾಗೂ ಕಿರುಕುಳ ನೀಡಲು ಆಡಳಿತ ಯಂತ್ರವನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರಕಟಣೆಯಲ್ಲಿ ತೀವ್ರ ಕಳವಳ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ಹಿಂದೂಗಳನ್ನು ಟಾರ್ಗೆಟ್ ಮಾಡಿ ಕೇಸ್ ದಾಖಲಿಸುವುದನ್ನು ಖಂಡಿಸಿರುವ ಕ್ಯಾ.ಚೌಟ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ, ತನ್ನ ಹುಳುಕನ್ನು ಮರೆಮಾಚಲು ಹತಾಶೆಯಿಂದ ಹಿಂದೂಗಳ ಧ್ವನಿ ಹತ್ತಿಕ್ಕುತ್ತಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಬಿಜೆಪಿ ಮುಖಂಡ ಹಾಗೂ ಹಿಂದೂ ನಾಯಕ ಅರುಣ್ ಪುತ್ತಿಲ ಅವರನ್ನು ಕಲಬುರಗಿಗೆ ಗಡಿಪಾರು ಮಾಡಲು ನಿರ್ಧರಿಸಿದೆ. ಹಿಂದೂ ಸಮುದಾಯದ ಯುವಕರು ಹಾಗೂ ಪ್ರಮುಖ ನಾಯಕರನ್ನು ಸುಳ್ಳು ಕೇಸ್ ದಾಖಲಿಸಿ, ಗಡಿಪಾರು ಮಾಡಲು ಹೊರಟಿರುವುದನ್ನು ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದ ಈ ಸಂವಿಧಾನ ವಿರೋಧಿ, ಅಧಿಕಾರಶಾಹಿ ಹಾಗೂ ಹಿಂದೂ ವಿರೋಧಿ ಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರವು ಹೆಜ್ಜೆ ಹೆಜ್ಜೆಗೂ ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಎನ್ನುವುದಕ್ಕೆ ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅನಿರೀಕ್ಷಿತ ಬೆಳವಣಿಗೆಗಳೇ ಸಾಕ್ಷಿ. ಪೊಲೀಸರು ರಾತ್ರೋರಾತ್ರಿ ಕಡಬ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಹಿಂದೂ ಮುಖಂಡರು, ಯುವಕರ ಮನೆಗಳಿಗೆ ತೆರಳಿ ಮಾನಸಿಕ ಕಿರುಕುಳ ಹಾಗೂ ಬೆದರಿಸುತ್ತಿರುವುದು ಅತ್ಯಂತ ಕಾನೂನು ಬಾಹಿರ ಕ್ರಮವಾಗಿದೆ. ಪೊಲೀಸ್ ವ್ಯವಸ್ಥೆ ಹಾಗೂ ಸರ್ಕಾರ ಒಂದು ಸಮುದಾಯದ ಪರವಾಗಿ ನಿಲ್ಲುವ ಮೂಲಕ ಜಿಲ್ಲೆಯ ಹಿಂದೂ ಸಮಾಜದವರನ್ನು ಭಾವನೆಗಳಿಗೆ ಘಾಸಿಗೊಳಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಲು ಪಣ ತೊಟ್ಟಂತಿದೆ. ಇದು ಸಿದ್ದರಾಮಯ್ಯ ಸರ್ಕಾರದ ತುಷ್ಟೀಕರಣ ರಾಜಕಾರಣದ ಪರಮಾವಧಿಯಾಗಿದ್ದು, ಕಾಂಗ್ರೆಸ್‌ನವರ ಈ ಕೊಳಕು ಮನಸ್ಥಿತಿಯನ್ನು ಕೊನೆಗೊಳಿಸದಿದ್ದರೆ ನಮ್ಮ ಪಕ್ಷದ ಹಾಗೂ ಹಿಂದೂ ಸಮಾಜದ ಸುಮ್ಮನಿರುವುದಿಲ್ಲ. ಸರ್ಕಾರದ ಈ ಹಿಂದೂ ವಿರೋಧಿ ನೀತಿ ವಿರುದ್ಧ ರಾಜ್ಯವ್ಯಾಪಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಮಾಜದ ನಾಯಕರಿಗೆ ನೀಡುತ್ತಿರುವ ಕಿರುಕುಳ ಬಗ್ಗೆ ಕಳವಳ ವ್ಯಕ್ತಪಡಿಸಿ ಈಗಾಗಲೇ ನಾನು ರಾಜ್ಯ ಪೊಲೀಸ್ ಮಹಾನಿರ್ದೇಶಕರೊಂದಿಗೆ ಮಾತನಾಡಿದ್ದೇನೆ. ಜಿಲ್ಲೆಯಲ್ಲಿ ಪೊಲೀಸರ ಈ ರೀತಿಯ ವರ್ತನೆಯನ್ನು ಕೂಡಲೇ ನಿಲ್ಲಿಸುವಂತೆ ಅವರಲ್ಲಿ ಕೋರಿದ್ದೇನೆ. ಜೊತೆಗೆ ನಮ್ಮ ಜಿಲ್ಲೆಯ ಬಿಜೆಪಿ ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಂಗಳವಾರ ಮಂಗಳೂರು ಪೊಲೀಸ್ ಆಯುಕ್ತ ಹಾಗೂ ಎಸ್ಪಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಜಿಲ್ಲೆಯು ಅತ್ಯಂತ ಸುಸಂಸ್ಕೃತ, ವಿದ್ಯಾವಂತ, ಸಮೃದ್ಧ ಮತ್ತು ಸ್ವಾವಲಂಬಿ ರಾಷ್ಟ್ರೀಯತೆಯ ಭದ್ರಕೋಟೆಯಾಗಿದ್ದು, ಇದು ಜಾತ್ಯತೀತತೆಯ ಮುಖವಾಡ ಹಾಕಿಕೊಂಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಸಹಿಸಲು ಸಾಧ್ಯವಾಗುತ್ತಿಲ್ಲ. ತನ್ನ ಓಟ್ ಬ್ಯಾಂಕ್ ಹಾಗೂ ಮುಸ್ಲಿಂ ಸಮುದಾಯ ಓಲೈಕೆಗಾಗಿ ಜಿಲ್ಲೆ ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಹೊರಟಿದೆ. ಹಿಂದೂ ಸಂಘಟನೆಗಳ ಧ್ವನಿ ಅಡಗಿಸುವ ಹಾಗೂ ಸಮಾಜವನ್ನು ಒಡೆಯುವ ಕೆಲಸಕ್ಕೆ ಸಿದ್ದರಾಮಯ್ಯ ಸರಕಾರ ಕೈ ಹಾಕಿದ್ರೆ ನಾವು ಸುಮ್ಮನಿರುವುದಿಲ್ಲ ಎಂದು ಕ್ಯಾ. ಚೌಟ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article