
ಎಸ್.ಎನ್. ಮೂಡುಬಿದಿರೆ ಪಾಲಿಟೆಕ್ನಿಕ್: ಅಂತಾರಾಷ್ಟ್ರೀಯ ಗ್ಲೋಬಲ್ ಯೂಥ್ ಸಮ್ಮಿಟ್ ಗೆ ಆಯ್ಕೆ
ಮೂಡುಬಿದಿರೆ: ಎಸ್.ಎನ್. ಮೂಡುಬಿದಿರೆ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ಐದು ವಿದ್ಯಾರ್ಥಿಗಳು ಜೂನ್ 4 ರಿಂದ 7ರ ತನಕ ಮಂಗಳೂರಿನ ಯೆನಪೋಯ ವಿಶ್ವ ವಿದ್ಯಾಲಯದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಗ್ಲೋಬಲ್ ಯೂಥ್ ಸಮ್ಮಿಟ್ 2025 ಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲೆ ನೊರೊನ್ಹಾ ತರೀನಾ ರೀಟಾ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಮ್ಮೇಳನದಲ್ಲಿ ಭಾರತದ 20 ರಾಜ್ಯಗಳಿಂದ ಹಾಗೂ 10 ಇತರ ದೇಶಗಳನ್ನು ಒಳಗೊಂಡಂತೆ ಸುಮಾರು 500ಕ್ಕೂ ಹೆಚ್ಚು ಯುವ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ವ್ಯಾಪ್ತಿಯಲ್ಲಿ ಬರುವ ಎಸ್. ಎನ್.ಮೂಡುಬಿದಿರೆ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ಚಿತ್ರಶ್ರೀ ಇವರು ಸ್ಟಾರ್ಟ್ ಅಪ್ ಎಕೋ ಸಿಸ್ಟಮ್ & ಎಂಟರ್ಪ್ರೈನರ್ಶಿಪ್ ಎಂಬ ವಿಷಯದ ಕುರಿತು ಪೋಸ್ಟರ್ ಪ್ರೆಸೆಂಟೇಶನ್ ನೀಡಲಿದ್ದಾರೆ ಹಾಗೆ ಚಿತ್ರಶ್ರೀ, ವಿನೋದ್, ಸುದರ್ಶನ್, ವೀರತ್, ಗಣೇಶ್ ಇವರ ತಂಡವು ಕರಾವಳಿಯ ಯಕ್ಷಗಾನ ಮತ್ತು ಜನಪದ ಕಲೆಗಳನ್ನು ಪ್ರದರ್ಶಿಸಲಿದ್ದಾರೆ.
ಈ ಹಿಂದೆ 2025 ಫೆಬ್ರವರಿ 28 ರಿಂದ ಮಾರ್ಚ್ 4 ರ ತನಕ ಬೆಂಗಳೂರಿನಲ್ಲಿ ನಡೆದ 13 ವಿಶ್ವವಿದ್ಯಾಲಯದ ವ್ಯಾಪ್ತಿಯ ರಾಜ್ಯ ಮಟ್ಟದ ಯುವಜನ ಉತ್ಸವದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯನ್ನು ಪ್ರತಿನಿಧಿಸಿದ ಇದೇ ವಿದ್ಯಾರ್ಥಿಗಳ ತಂಡವು 4 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದಿರುತ್ತಾರೆ ಹಾಗೂ 2025ರ ಮೇ 15 ಮತ್ತು 16 ರಂದು ಮಂಗಳೂರಿನ ಯೆನೆಪೋಯ ವಿಶ್ವ ವಿದ್ಯಾಲಯದಲ್ಲಿ ನಡೆದ 'ಯೂತ್ ಐಕಾನ್ 2025' ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಮತ್ತೊಮ್ಮೆ ತಾಂತ್ರಿಕ ಶಿಕ್ಷಣ ಇಲಾಖೆಯನ್ನು ಪ್ರತಿನಿಧಿಸಿರುತ್ತಾರೆ.
ಎಸ್.ಎನ್.ಮೂಡುಬಿದಿರೆ ಪಾಲಿಟೆಕ್ನಿಕ್ ಸಂಸ್ಥೆಯು ಸತತವಾಗಿ ಎರಡು ಬಾರಿ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಿದ ರಾಜ್ಯದ ಏಕೈಕ ಪಾಲಿಟೆಕ್ನಿಕ್ ಆಗಿರುತ್ತದೆ.
ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಕೆ .ಅಭಯಚಂದ್ರ ಜೈನ್, ಎನ್.ಎಸ್.ಎಸ್. ಕಾರ್ಯಕ್ರಮ ಆಧಿಕಾರಿ ರಾಮ್ ಪ್ರಸಾದ್ ಹಾಗೂ ಗೋಪಾಲ ಕೃಷ್ಣ ಮತ್ತು ಸಮ್ಮೇಳನಕ್ಕೆ ಆಯ್ಕೆಯಾದ 5 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.