ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸಬೇಡಿ: ಭಂಡಾರಿ

ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸಬೇಡಿ: ಭಂಡಾರಿ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನರು ಸುಶಿಕ್ಷಿತರು, ಬುದ್ಧಿಜೀವಿಗಳು. ಕೆಲವೇ ಕೆಲವು ಜನರಿಂದ ಈ ಜಿಲ್ಲೆಯ ಘನತೆಗೆ ಚ್ಯುತಿ ತರುವ ಪ್ರಯತ್ನವಾಗುತ್ತಿದೆ. ಇದನ್ನು ಮಟ್ಟಹಾಕಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಪ್ರಯತ್ನಪಡುವ ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಇದು ಖಂಡನೀಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಶೇ.99ಜನರಿಗೆ ಈ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಬೇಕು, ಅಭಿವೃದ್ಧಿಯಾಗಬೇಕು. ಈ ಜಿಲ್ಲೆಗೆ ಹೊಸ ಕೈಗಾರಿಕೆಗಳು ಬರಬೇಕು, ಪ್ರವಾಸೋದ್ಯಮ ಬೆಳೆಯಬೇಕು, ಹೊಸ ಹೊಸ ಉದ್ಯಮ ಮೂಲಕ ಉದ್ಯೋಗ ಸೃಷ್ಟಿಯಾಗಬೇಕು. ಆದರೆ ಕೆಲವು ವರ್ಗಕ್ಕೆ ಇದ್ಯಾವುದೂ ಬೇಕಾಗಿಲ್ಲ, ಕೋಮು ಸಂಘರ್ಷ ಜೀವಂತವಾಗಿರಬೇಕು ಅಷ್ಟೇ.. ಈ ಕೋಮುಗಲಭೆ ಹುನ್ನಾರದ ಹಿಂದೆ ಯಾವುದೋ ಕಾಣದ ಕೈಗಳು ಕೆಲಸ ಮಾಡುತ್ತಿವೆ. ನೂತನವಾಗಿ ನಿಯೋಜನೆಗೊಂಡ ಪೊಲೀಸ್ ಅಧಿಕಾರಿಗಳು  ತನಿಖೆಯ ಮೂಲಕ ಶಾಂತಿ ಕದಡುವವರನ್ನು ಪತ್ತೆಹಚ್ಚಿ  ಕಾನೂನು ಪ್ರಕಾರ ಕ್ರಮ ಕೈಗೊಂಡು ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವೊಂದು ಸಂಘಟನೆಗಳ  ನಾಯಕರು, ಜವಾಬ್ದಾರಿಯುತ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಪೊಲೀಸ್ ಅಧಿಕಾರಿಗಳಿಗೆ ಬೆಂಬಲ ನೀಡುವ ಬದಲು ಅವರ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಈ ಜಿಲ್ಲೆಯ ಅಭಿವೃದ್ಧಿ, ಜನರ ಶಾಂತಿ ಬೇಕಾಗಿಲ್ಲ ಅನ್ನುವುದು ಸ್ಪಷ್ಟವಾಗಿದೆ.

ಅಧಿಕಾರಿಗಳ ಜತೆ ನಾವಿದ್ದೇವೆ: ಯಾವುದೇ ನಾಯಕರ ಹೇಳಿಕಗೆ ಪೊಲೀಸ್ ಅಕಾರಿಗಳು ತಲೆಕೆಡಿಸಬೇಕಾಗಿಲ್ಲ. ನಿಮ್ಮ ಕರ್ತವ್ಯ ನೀವು ಮಾಡಿ. ಈ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ನಿಮ್ಮ ಜತೆಗಿದ್ದಾರೆ.

ಪೂರ್ಣ ಸ್ವಾತಂತ್ರ್ಯ: ದ.ಕ. ಜಿಲ್ಲೆಗೆ ದಕ್ಷ  ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿ, ಅವರ ಕರ್ತವ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.  ಆ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳು ಕರ್ತವ್ಯವನ್ನು ಆರಂಭಿಸಿದ್ದಾರೆ. ರಾಜಕೀಯ ಲಾಲಸೆಗೆ ಬಿದ್ದು ಸೃಷ್ಟಿಯಾಗುವ ಅಪಪ್ರಚಾರಗಳಿಗೆ ಕಿವಿಗೊಡದೆ ಈ ಜಿಲ್ಲೆಯ ಶಾಂತಿ-ಸೌಹಾರ್ದತೆಗೆ ನೈತಿಕ ಬೆಂಬಲ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡೋಣ.

ಜೇನುಗೂಡು ಹಾಳು ಮಾಡಿದ್ಯಾರು?

ಗತಕಾಲದಿಂದ ಜಿಲ್ಲೆಯ ಇತಿಹಾಸ ನೋಡಿದರೆ ಇಲ್ಲಿನ ನಾಗರಿಕರು ಶಾಂತಿಪ್ರಿಯರು. ನಮ್ಮ ಹಿರಿಯರ ಕಾಲದಲ್ಲಿ ಈ ರೀತಿ ಘರ್ಷಣೆ ಇರಲಿಲ್ಲ. ವ್ಯವಹಾರ, ವ್ಯಾಪಾರದಲ್ಲಿ  ಸೌಹಾರ್ದತೆ, ಸಹಬಾಳ್ವೆ ಇತ್ತು. ಆದರೆ 2 ದಶಕದಿಂದ ಓಟ್ ಬ್ಯಾಂಕ್ ರಾಜಕಾರಣಕ್ಕೆ ಜಿಲ್ಲೆ  ಬಲಿಯಾಗಿದ್ದು ಜೇನುಗೂಡಿಗೆ ಕಲ್ಲು ಬಿಸಾಡಿ ಹಾಳು ಮಾಡಿದವರು ಯಾರು ಎನ್ನುವುದನ್ನು ಶಾಸಕ ಡಾ. ಭರತ್ ಶೆಟ್ಟಿ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಜಿಲ್ಲೆಯ ಸದ್ಯದ ಸ್ಥಿತಿ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ.

ಗಡಿಪಾರು ಆರೋಪಿಗಳ ಹಿಸ್ಟರಿ ಪರಿಶೀಲಿಸಿ:

ಜಿಲ್ಲೆಯಲ್ಲಿ 36 ಮಂದಿಯನ್ನು ಗಡಿಪಾರುಗೊಳಿಸಿ ನೋಟೀಸು ಹೊರಡಿಸಲಾಗಿದ್ದು, ಕಾನೂನು ಕ್ರಮ ನಡೆಯುತ್ತಿದೆ. ಈ 36 ಮಂದಿಯ ಮೇಲೆ ಎಷ್ಟು? ಯಾವ ಕೇಸುಗಳಿವೆ? ಎನ್ನುವುದನ್ನು ಶಾಸಕ ವೇದವ್ಯಾಸ ಕಾಮತ್ ಪರಿಶೀಲಿಸಲಿ. ಆಗ ಸಮಾಜದ ಸ್ವಾಸ್ಥ್ಯ ಕೆಡಿಸುವವರು ಯಾರು ಎನ್ನುವುದು ಕಾಮತ್ ಗೆ ಮನದಟ್ಟಾಗಲಿದೆ. ವಿನಾ ಕಾರಣ ಸರಕಾರದ ಮೇಲೆ ಆರೋಪ ಹೊರಿಸಿ ಕಾಲ ಕಳೆಯಬೇಡಿ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article