
ಎಫ್‌ಎಂಸಿಐ ನೂತನ ನಿರ್ದೇಶಕರ ಪದಗ್ರಹಣ
ಮಂಗಳೂರು: ಫಾದರ್ ಮುಲ್ಲರ್ ಚಾರಿಟೆಬಲ್ ಇನ್ಸ್ಟಿಟ್ಯೂಶನ್(ಎಫ್‌ಎಂಸಿಐ)ನ ನೂತನ ನಿರ್ದೇಶಕರಾಗಿ ರೆ.ಫಾ. ಫೌಸ್ಟಿನ್ ಲುಕಾಸ್ ಲೋಬೋ ಬುಧವಾರ ನಿರ್ಗಮನ ನಿರ್ದೇಶಕ ರೆ.ಫಾ. ರಿಚ್ಚರ್ಡ್ ಅಲೋಶಿಯಸ್ ಕುವೆಲ್ಲೋ ಅವರಿಂದ ಅಧಿಕಾರ ಸ್ವೀಕರಿಸಿದರು.
ನೂತನ ನಿರ್ದೇಶಕರಿಗೆ ಅಧಿಕಾರ ಸ್ವೀಕಾರ ಹಾಗೂ ನಿರ್ಗಮನ ನಿರ್ದೇಶಕರಿಗೆ ಬೀಳ್ಕೊಡುಗೆ ಸಮಾರಂಭ ಎಫ್‌ಎಂಸಿಐನ ಚಾಪೆಲ್ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮತ್ತು ಎಫ್‌ಎಂಸಿಐನ ಉಪಾಧ್ಯಕ್ಷರೂ ಆಗಿರುವ ರೆ.ಫಾ. ಮ್ಯಾಕ್ಸಿಂ ನೊರೋನಾ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಆಡಳಿತ ಮತ್ತು ಸಲಹಾ ಸಮಿತಿ ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.
ಚಾಪೆಲ್‌ನ ರೆ.ಫಾ. ರೊನಾಲ್ಡ್ ಲೋಬೋ ಧಾರ್ಮಿಕ ಪ್ರಾರ್ಥನಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಸರಳವಾಗಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ನಿರ್ಗಮನ ನಿರ್ದೇಶಕ ಫಾ. ರಿಚ್ಚರ್ಡ್ ಕುವೆಲ್ಲೋ ಅವರ ಕಾರ್ಯ ಸಾಧನೆಗಳ ಬಗ್ಗೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು (ಎಫ್‌ಎಂಎಂಸಿ)ಯ ವೈಸ್ ಡೀನ್ ಡಾ. ವೆಂಕಟೇಶ್ ಬಿ.ಎಂ., ಡೀನ್ ಡಾ. ಆಂಟನಿ ಸಿಲ್ವಿಯನ್ ಡಿಸೋಜಾ ಅವರು ನೆನಪಿಸಿಕೊಂಡರು.
ಪ್ರೊ. ಡಾ. ಚೆರಿಷ್ಮಾ ಡಿಸಿಲ್ವಾ ವಂದಿಸಿದರು. ಎಫ್‌ಎಂಎಂಸಿಯ ಆಡಳಿತಾಧಿಕಾರಿ ರೆ.ಫಾ. ಅಜಿತ್ ಬಿ. ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಎಫ್‌ಎಂಸಿಐನ ನೂತನ ನಿರ್ದೇಶಕ ರೆ.ಫಾ. ಫೌಸ್ಟಿನ್ ಲೋಬೋ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ನಡೆಯಿತು.
ರೆ.ಫಾ. ರಿಚ್ಚರ್ಡ್ ಅಲೋಶಿಯಸ್ ಕುವೆಲ್ಲೋ ಅವರ ಅವಧಿಯಲ್ಲಿ ಕನ್ವೆನ್ಶನ್ ಸೆಂಟರ್, ಒಳಾಂಗಣ ಸ್ಟೇಡಿಯಂ ಮತ್ತು ಬಹುವಿಧದ ಆಸ್ಪತ್ರೆ ನವೀಕರಣ ಕಾರ್ಯಗಳು ನಡೆದಿವೆ. ಎಫ್‌ಎಂಸಿಐ ಶೈಕ್ಷಣಿಕ ಜಾಲಕ್ಕೆ ಮೂರು ಹೊಸ ಕಾಲೇಜುಗಳು ಸೇರ್ಪಡೆಗೊಂಡಿವೆ. ಅತ್ಯಾಧುನಿಕ ತಂತ್ರಜ್ಞಾನದ ಒಟಿಗಳ ಸ್ಥಾಪನೆ, ಐಸಿಯು ಮೇರ್ಲ್ದರ್ಜೆ ಮೊದಲಾದ ಕಾರ್ಯಗಳು ನಡೆದಿವೆ.
ನೂತನ ನಿರ್ದೇಶಕ ರೆ. ಫಾ. ಫೌಸ್ಟಿನ್ ಲೂಕಸ್ ಲೋಬೋ ಅವರು 35 ವರ್ಷಗಳಿಗೂ ಅಧಿಕ ಧಾರ್ಮಿಕ ಸೇವೆಯ ಅನುಭವ ಹೊಂದಿದ್ದಾರೆ. ಮಾತ್ರವಲ್ಲದೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಜವಾಬ್ಧಾರಿಗಳನ್ನು ನಿರ್ವಹಿಸಿದ ದಾಖಲೆ ಹೊಂದಿದ್ದಾರೆ.
ಪಾಂಟಿಫಿಕಲ್ ಮಿಷನ್ ಸೊಸೈಟಿಯ ರಾಷ್ಟ್ರೀಯ ನಿರ್ದೇಶಕರಾಗಿ, ಪಿಎಂಎಸ್ ಇಂಟರ್‌ನ್ಯಾಷನಲ್ ಹಣಕಾಸು ಸಮಿತಿಯ ಸದಸ್ಯರಾಗಿ, ರ್ಕಾಟಕ ಸರಕಾರದ ಕ್ರಿಶ್ಚಿಯನ್ ಅಭಿವೃದ್ದಿ ಮಂಡಳಿಯ ಸದಸ್ಯ ರಾಗಿ, ಬೆಂಗಳೂರು ಸರಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನೀತಿಶಾಸ್ತ್ರ ಸಮಿತಿ ಸದಸ್ಯರಾಗಿ, ಕರ್ನಾಟಕ ಕ್ಯಾರಿಟಸ್ ಇಂಡಿಯಾದ ಅಭಿವೃದ್ಧಿ ಸಲಹೆಗಾರರಾಗಿ, ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ನ ಮಾಜಿ ಕಾರ್ಯದರ್ಶಿಯಾಗಿ, ಕರ್ನಾಟಕ ಪ್ರದೇಶ ಕ್ಯಾಥಲಿಕ್ ಬಿಷಪ್ಗಳ ಮಂಡಳಿಯ ಮಾಜಿ ಪಿಆರ್‌ಒ ಆಗಿ ಹಾಗೂ ಇತ್ತೀಚೆಗೆ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಫಾದರ್ ಮುಲ್ಲರ್ ಕಾಲೇಜ್ ಆಫ್ ಫಾರ್ಮಾಸುಟಿಕಲ್ ಸಾಯನ್ಸ್ನ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.