
ಹಣ ದುಪ್ಪಟ್ಟು ಮಾಡುವುದಾಗಿ ಸಂಬಂಧಿಕರಿಗೆ ವಂಚನೆ: ಆರೋಪಿ
ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ದುಪ್ಪಟ್ಟು ಮಾಡಿಸುತ್ತೇನೆಂದು ಹೇಳಿ ಕುಟುಂಬಸ್ಥರಿಂದಲೇ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ ಬಳಿಕ ದಿಢೀರ್ ನಾಪತ್ತೆಯಾಗಿದ್ದ ಕೃಷ್ಣಪ್ರಸಾದ್ ಶೆಟ್ಟಿ ಎಂಬಾತನನ್ನು ಒಂದೂವರೆ ವರ್ಷದ ಬಳಿಕ ಮಂಗಳೂರಿನ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಪ್ರಸಾದ್ ಶೆಟ್ಟಿ ಮೂಲತಃ ಕುಂದಾಪುರ ತಾಲೂಕಿನ ಸಿದ್ದಾಪುರದ ಬಂಟಕೋಡು ಎಂಬಲ್ಲಿನ ನಿವಾಸಿಯಾಗಿದ್ದು, 2016ರಲ್ಲಿ ಮಂಗಳೂರಿನ ಯುವತಿಯನ್ನು ಮದುವೆಯಾಗಿದ್ದ. ಆನಂತರ, ಯುವತಿ ಕುಟುಂಬಸ್ಥರನ್ನು ನಂಬಿಸಿ ಹಣ ಪಡೆದಿದ್ದು, ಷೇರು ಮಾರುಕಟ್ಟೆಯಲ್ಲಿ ದಿನವಹಿ ವಹಿವಾಟು ನಡೆಸಿದರೆ ಗರಿಷ್ಠ ಲಾಭ ಸಿಗುತ್ತದೆ ಎಂದು ನಂಬಿಸಿದ್ದ. ಆತನ ಮಾತನ್ನು ನಂಬಿ ಹಲವಾರು ಮಂದಿ ಹಣ ಹೂಡಿಕೆ ಮಾಡಿದ್ದರು. ಈ ರೀತಿ ಹೂಡಿಕೆ ಮಾಡಿದವರು ಹೆಚ್ಚಿನವರು ಸಂಬಂಧಿಕರೇ ಆಗಿದ್ದರು. ಇದಲ್ಲದೆ, ಪತ್ನಿಯ ಒಡವೆ, ಆಸ್ತಿಯ ಹಣವನ್ನೂ ಪಡೆದು ಹೂಡಿಕೆ ಮಾಡಿಸಿದ್ದ.
ಎಲ್ಲರ ಹಣ ಪಡೆದು ತನ್ನದೇ ಹೆಸರಿನಲ್ಲಿ ಷೇರು ಮಾರುಕಟ್ಟೆಯ ಯುಎಫ್‌ಓ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿದ್ದಾನೆ ಎನ್ನಲಾಗಿದ್ದು, ಅದರಲ್ಲಿ ಭಾರೀ ನಷ್ಟಕ್ಕೀಡಾಗಿದ್ದ. ಸಂಬಂಧಿಕರು ಅನೇಕರು ಹಣ ನೀಡಿದ್ದು ಅವರು ಮರಳಿ ಕೇಳತೊಡಗಿದ್ದಾಗ 2023ರ ನವೆಂಬರ್ ತಿಂಗಳಲ್ಲಿ ದಿಢೀರ್ ಕಾಣೆಯಾಗಿದ್ದ. ಪತ್ನಿ ಜೊತೆಗೆ ಮಂಗಳೂರಿನ ಬಂಟ್ಸ್ ಹಾಸ್ಟೆಲಿಗೆ ಕಾರಿನಲ್ಲಿ ಬಂದು, ಆಕೆಯನ್ನು ಕಾರಿನಲ್ಲಿ ಕೂರಿಸಿ ಆಕ್ಸಿಸ್ ಬ್ಯಾಂಕಿಗೆಂದು ತೆರಳಿ ಅಲ್ಲಿಂದಲೇ ನಾಪತ್ತೆಯಾಗಿದ್ದ. ಆನಂತರ, ಎಲ್ಲಿ ಹೋಗಿದ್ದಾನೆಂದು ತಿಳಿಯದೇ ಸಂಬಂಧಿಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬಂದರು ಠಾಣೆಯಲ್ಲಿ ದಾಖಲಾಗಿದ್ದ ಮೋಸದ ಪ್ರಕರಣ ಬಳಿಕ ಸಿಇಎನ್ ಠಾಣೆಗೆ ವರ್ಗಾವಣೆಗೊಂಡಿತ್ತು. ಕಳೆದ ಜೂನ್ ೩ರಂದು ಕುಂದಾಪುರದ ತನ್ನ ಮನೆಗೆ ಬಂದಿದ್ದಾನೆಂದು ತಿಳಿದ ಮಂಗಳೂರು ಪೊಲೀಸರು ತೆರಳಿ ವಶಕ್ಕೆ ಪಡೆದಿದ್ದಾರೆ ಎನ್ನುವುದು ತಡವಾಗಿ ತಿಳಿದುಬಂದಿದೆ.
ಸದ್ಯಕ್ಕೆ ಆರೋಪಿ ಕೃಷ್ಣಪ್ರಸಾದ್ ಮಂಗಳೂರು ಜೈಲಿನಲ್ಲಿದ್ದು, ಜೆರೋದಾ ಸೇರಿದಂತೆ ವಿವಿಧ ಷೇರು ಮಾರುಕಟ್ಟೆ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ಕೇಳಿ ಪೊಲೀಸರು ಕಂಪನಿಗಳಿಗೆ ಪತ್ರ ರವಾನಿಸಿದ್ದಾರೆ. ಒಂದೂವರೆ ವರ್ಷದಲ್ಲಿ ದೆಹಲಿ, ಬೆಂಗಳೂರು ಸೇರಿ ವಿವಿಧ ಕಡೆಗಳಲ್ಲಿ ನೆಲೆಸಿದ್ದ ಕೃಷ್ಣಪ್ರಸಾದ್, ಅಲ್ಲಿಯೂ ಷೇರು ಮಾರುಕಟ್ಟೆ ವಹಿವಾಟು ನಡೆಸಿದ್ದ ಎನ್ನುವ ಮಾಹಿತಿಯಿದೆ. ಕೆಲವು ಸಂಬಂಧಿಕರು ತಮ್ಮ ಸ್ನೇಹಿತರಿಂದಲೇ ಹಣ ಪಡೆದು ದುಪ್ಪಟ್ಟು ಲಾಭದ ಆಸೆಯಿಂದ ಷೇರು ಮಾರುಕಟ್ಟೆಗೆ ಹೂಡಿಕೆ ಮಾಡಿಸಿದ್ದರು. ಅಂದಾಜು 6 ಕೋಟಿಗೂ ಹೆಚ್ಚು ಹಣ ನೀರಿನಲ್ಲಿಟ್ಟ ಹೋಮದಂತೆ ಖಾಲಿಯಾಗಿದೆ ಎಂದು ಹೇಳುತ್ತಿದ್ದು, ಹಣ ಕಳಕೊಂಡವರು ಹಿಡಿಶಾಪ ಹಾಕುತ್ತಿದ್ದಾರೆ.