
ಕೆಂಪೇಗೌಡರ ಹಾಗೆ ಕನಸುಕಟ್ಟಿ: ಭವ್ಯಾ ನಿಡ್ಪಳ್ಳಿ
ಪುತ್ತೂರು: ಬೆಂಗಳೂರಿನಂತಹ ಮಹಾನಗರಕ್ಕೆ ಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡ ಅವರ ದೂರದೃಷ್ಟಿ ಕನಸು ಇಂದು ಬೆಂಗಳೂರನ್ನು ಸಿಲಿಕಾನ್ ಸಿಟಿ ಮಾಡಲು ಶಕ್ತವಾಗಿದೆ. ಆದರೆ ಕನಸುಗಳು ಬಿಡಿ. ಕನಿಷ್ಟ 10 ನಿಮಿಷವೂ ತಾಳ್ಮೆಯಿಂದ ಕುಳಿತುಕೊಳ್ಳಲಾರದ ಇಂದಿನ ಯುವಜನತೆಯಿಂದ ನಾಡುಕಟ್ಟಲು ಸಾಧ್ಯವಾದೀತೇ ಎಂದು ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಭವ್ಯಾ ಆರ್. ನಿಡ್ಪಳ್ಳಿ ಹೇಳಿದರು.
ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಒಕ್ಕಲಿಗ ಗೌಡಸೇವಾ ಸಂಘದ ಆಶ್ರಯದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲಮಾದ್ಯಮ ಶಾಲಾ ಸಭಾಂಗಣದಲ್ಲಿ ನಡೆದ ನಾಡುಪ್ರಭು ಕೆಂಪೇಗೌಡ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
400 ವರ್ಷಗಳ ಹಿಂದೆ ಭವಿಷ್ಯಕ್ಕೆ ಬೇಕಾದದ್ದನ್ನು ಯೋಚಿಸುವ ಶಕ್ತಿ ಇದ್ದ ಈ ದಾರ್ಶನಿಕ ಕೆಂಪೇಗೌಡ ಅವರು ಇಂದಿನ ಕಾಲದ ಇಂಗುಗುಂಡಿಗಳ ಯೋಜನೆಯನ್ನು ಅಂದೇ ಚಿಂತನೆ ಮಾಡುವ ಮೂಲಕ ಸಾವಿರಾರು ಕೆರೆಗಳನ್ನು ನಿರ್ಮಿಸಿದ್ದರು. ಜನಸಾಮಾನ್ಯರು ಬದುಕುವುದಕ್ಕೆ ಯಾವುದು ಅವಶ್ಯಕ ಎಂದು ತಿಳಿದಿದ್ದ ಪರಿಸರವಾದಿ ಕೆಂಪೇಗೌಡ ಅವರು ಮಾಡಿದ್ದ ಅಂದಿನ ಕೆರೆಗಳನ್ನು ಕನಿಷ್ಟ ಪಕ್ಷ ಉಳಿಸಿಕೊಳ್ಳಲೂ ನಮ್ಮ ವ್ಯವಸ್ಥೆಯಲ್ಲಿ ಸಾಧ್ಯವಾಗಿಲ್ಲ. ಈ ಕೆರೆಗಳನ್ನು ಮುಚ್ಚಿ ಈಗ ಕಟ್ಟಡಗಳ ನಿರ್ಮಾಣವಾಗಿದೆ. ಜತೆಗೆ ಕೆಂಪೇಗೌಡರ ಚಿಂತನೆಗಳೂ ನಾಶವಾಗಿವೆ ಎಂದವರು ಹೇಳಿದರು.
ಸಮಾಜಮುಖಿ ಚಿಂತನೆ ಇದ್ದ ಗೌಡರು ಸಮಾಜದಲ್ಲಿ ಸಾಮರಸ್ಯ ಸಾಧಿಸುವುದಕ್ಕೆ ಕುಲಕಸುಬುಗಳ ಅಗತ್ಯತೆಯನ್ನು ಕಂಡುಕೊಂಡಿದ್ದರು. ಹಾಗಾಗಿ ಬೆಂಗಳೂರಿನಲ್ಲಿ ಕುಲಕಸುಬುಗಳ ವೃತ್ತಿಯನ್ನು ಮಾಡುವ ಜನತೆಯ ಊರುಗಳನ್ನೇ ನಿರ್ಮಿಸಿದ್ದರು. ಇಂದಿಗೂ ಆ ಊರುಗಳನ್ನು ನಾವು ಬೆಂಗಳೂರಿನಲ್ಲಿ ಕಾಣಬಹುದು. ಆದರೆ ಕುಲಕಸುಬುಗಳು ಮಾತ್ರ ಮರೆಯಾಗಿವೆ. ಮರಗಳನ್ನು ನೆಟ್ಟು ಪರಿಸರ ಉಳಿಸಿದ್ದ ಕೆಂಪೇಗೌಡರ ಆಶಯಗಳನ್ನು ಅಭಿವೃದ್ಧಿಯ ಹೆಸರಲ್ಲಿ ನಾವಿಂದು ಬಲಿ ಪಡೆದುಕೊಳ್ಳುತ್ತಿದ್ದೇವೆ. ಪರಿಸರದ ಅಸ್ತಿತ್ವಕ್ಕೆ ಕೊಡಲಿ ಹಾಕುವ ಅಭಿವೃದ್ಧಿ ನಮ್ಮ ಬದುಕಿಗೂ ಅಸ್ತಿತ್ವ ಇಲ್ಲದಂತೆ ಮಾಡುವ ಸ್ಥಿತಿ ಈಗ ನಿರ್ಮಾಣವಾಗುತ್ತಿದೆ. ಇಂದು ಒಂದು ಮಳೆಬಂದರೆ ಬೆಂಗಳೂರು ಕೊಚ್ಚಿ ಹೋಗುತ್ತಿದೆ ಎಂದರೆ ಅದಕ್ಕೆ ಕಾರಣ ಕೆಂಪೇಗೌಡರಲ್ಲ ಬದಲಿಗೆ ನಾವು. ಆದರೆ ಯುವಜನತೆ ಕನಸು ಕಟ್ಟುವಾಗ ಕೆಂಪೇಗೌಡರಂತೆ ಕನಸು ಕಟ್ಟಿಕೊಳ್ಳಬೇಕು. ಇದು ಸಮಾಜದ ಬದುಕಿಗೆ ಪೂರಕ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆಯ ಅಧ್ಯಕ್ಷೆ ಲೀಲಾವತಿ ನಾಯ್ಕ್ ವಹಿಸಿದ್ದರು. ಒಕ್ಕಲಿಗ ಗೌಡಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಮಾತನಾಡಿ, ಕೆಂಪೇಗೌಡರು ರಾಷ್ಟ್ರವ್ಯಾಪ್ತಿಗೆ ಕೊಡುಗೆ ನೀಡಿದವರು. ಅವರ ಜಯಂತಿಯೂ ಒಂದು ಸಮುದಾಯಕ್ಕೆ ಸೀಮಿತವಲ್ಲ. ಅವರ ಆದರ್ಶಗಳ ಉದ್ದೀಪನೆಯಾಗಬೇಕಾಗಿದೆ ಎಂದರು. ಕ್ಷೇತ್ರಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, 400 ವರ್ಷಗಳ ಹಿಂದೆ ಬೆಂಗಳೂರು ಕಟ್ಟಿದ ಕೆಂಪೇಗೌಡರ ಆದರ್ಶ-ಕನಸುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಪ್ರಭಾರ ತಹಶೀಲ್ದಾರ್ ನಾಗರಾಜ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭೆಯ ಪೌರಾಯುಕ್ತ ಮಧು ಎಸ್ ಮನೋಹರ್ ಉಪಸ್ಥಿತರಿದ್ದರು.
ಉಪ ತಹಶೀಲ್ದಾರ್ ಸುಲೋಚನಾ ಪಿ.ಕೆ ಸ್ವಾಗತಿಸಿದರು. ತಾಲೂಕು ಕಚೇರಿಯ ವಿಷಯನಿರ್ವಾಹಕ ದಯಾನಂದ್ ಡಿ.ಟಿ ವಂದಿಸಿದರು. ಶಿಕ್ಷಕಿಯರಾದ ಆಶಾ ಕೆ ಮತ್ತು ಲತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.