ದೇಶ ಪಟ್ಟುವ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು: ಪ್ರತಿಭಾ ಆರ್.

ದೇಶ ಪಟ್ಟುವ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು: ಪ್ರತಿಭಾ ಆರ್.


ಕಾಪು: ನಾಡಪ್ರಭು ಕೆಂಪೇಗೌಡರ ಆದರ್ಶ ಮುಂದಿನ ಪೀಳಿಗೆಗೆ ದಾರಿದೀಪದಂತೆ. ಅವರ ದೂರದೃಷ್ಟಿಯನ್ನು ನಮ್ಮ ಇಂದಿನ ಯುವ ಪೀಳಿಗೆ ಮಾದರಿಯಾಗಿಸಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಹಶಿಲ್ದಾರ್ ಪ್ರತಿಭಾ ಆರ್. ಕರೆ ನೀಡಿದರು.

ಇಂದು ಕಾಪು ತಹಶಿಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ‘ನಾಡಪ್ರಭು ಕೆಂಪೇಗೌಡರ’ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಾಡಿನ ನಿರ್ಮಾತೃ ಕೆಂಪೇಗೌಡರು ಕರ್ನಾಟಕ ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತಹ ನಗರವನ್ನು ನಿರ್ಮಿಸಿದ್ದಾರೆ. ಬೆಂಗಳೂರು ಕಟ್ಟಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ವ್ಯವಸ್ಥಿತವಾದ ರೀತಿಯಲ್ಲಿ ಕೋಟೆ, ಪೇಟೆ, ಕೆರೆ, ಗುಡಿ, ಉದ್ಯಾನಗಳನ್ನು ನಿರ್ಮಿಸಿದರು. ಆರ್ಥಿಕವಾಗಿ ಪ್ರಗತಿ ಹೊಂದಲು ಕಸುಬು ಆಧಾರಿತ  ಪೇಟೆಗಳನ್ನು ನಿರ್ಮಿಸಿದರು. ಭವಿಷ್ಯದ ದೂರದೃಷ್ಟಿ ಇಟ್ಟುಕೊಂಡು ನಗರ ಕಟ್ಟಿದರು. ಇಂದು ಅದೆಷ್ಟೋ ಜನರಿಗೆ ಆಶ್ರಯ ನೀಡಿದೆ. ಉದ್ಯೋಗ ಅರಸಿಕೊಂಡು ಬರುವ ಜನರಿಗೆ ಅನ್ನ-ಉದ್ಯೋಗ ನೀಡಿದೆ. ಸಾಪ್ಟ್ ವೇರ್ ಇಂಡಸ್ಟ್ರಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಕರ್ನಾಟಕದ ಹೆಸರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಇಂತಹ ನಿರ್ಮಾತೃವಿನ ಆದರ್ಶ ಎಲ್ಲರಿಗೂ ಬೆಳಕಾಗಲಿ, ಮುಂದಿನ ಪೀಳಿಗೆ ಇವರಿಂದ ಸ್ಪೂರ್ತಿ ಪಡೆದು ನಾಡು ಕಟ್ಟುವ ಕೆಲಸದಲ್ಲಿ ತೊಡಗಲಿ ಎಂದು ತಹಶಿಲ್ದಾರ್ ಹೇಳಿದರು.

ಈ ಜಯಂತಿಯ ಅಂಗವಾಗಿ ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ನಡೆಸಲಾಗಿತ್ತು. ಇಂದಿನ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ಮಾತನಾಡಿ, ಕೆಂಪೇಗೌಡರ ಆಡಳಿತ ಕಾಲ ಅತ್ಯಂತ ಸುಭಿಕ್ಷವಾಗಿತ್ತು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟವರು ಅವರು. ಅವರ ಆದರ್ಶಗಳು ಎಲ್ಲರಿಗೂ ಮಾದರಿಯಾಗಲಿ ಎಂದು ಹಾರೈಸಿದರು.

ಶಾಲಾ ವಿದ್ಯಾರ್ಥಿಗಳು ನಾಡ ಪ್ರಭು ಕೆಂಪೇಗೌಡರ ಕುರಿತು ಭಾಷಣ ಮಾಡಿದರು. ಕೆಲವು ಮಕ್ಕಳು ದೇಶಭಕ್ತಿಗೀತೆ ಹಾಡಿದರು.

ಪುರಸಭಾ ಚೀಫ್ ಆಫೀಸರ್ ನಾಗರಾಜ್, ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ, ಪುರಸಭಾ ಉಪಾಧ್ಯಕ್ಷೆ ಸರಿತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್, ಎಲ್ಲಾ ಪುರಸಭಾ ಸದಸ್ಯರು, ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಉಪ ತಹಶಿಲ್ದಾರ್‌ಗಳಾದ ದೇವಕಿ, ರವಿಕಿರಣ್, ಅಶೋಕ್ ಕೋಟೆಕಾರ್, ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ತಾಲ್ಲೂಕು ಕಚೇರಿ ಸಿಬ್ಬಂದಿ, ಗ್ರಾಮಾಡಳಿತಾಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಹಾಜರಿದ್ದರು.

ದೇವಿಚರಣ್, ತಾಲ್ಲೂಕು ಕಚೇರಿ ಸಿಬ್ಬಂದಿ ಇವರು ಕಾರ್ಯಕ್ರಮ ನಿರೂಪಿಸಿದರು. ಲೋಕನಾಥ್ ಸ್ವಾಗತಿಸಿ, ದೇವಕಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article