
ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಸೆಮಿಸ್ಟರ್ ಪರೀಕ್ಷೆ ಮುಕ್ತಾಯವಾದ ಒಂದು ಗಂಟೆಯೊಳಗೆ ಫಲಿತಾಂಶ ಪ್ರಕಟ
ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ದ್ವಿತೀಯ ಸೆಮಿಸ್ಟರ್ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸಲಾಯಿತು.
ದ್ಬಿತೀಯ ಸೆಮಿಸ್ಟರ್ ಬಿಎ ತರಗತಿಯಲ್ಲಿ ಶೇಖಡಾ 93.64 ಅಂಕಗಳನ್ನು ಗಳಿಸಿದ ಫಾತಿಮತ್ ಮಿಝ್ನಾ, ಬಿಕಾಂನಲ್ಲಿ 92.77 ಅಂಕಗಳನ್ನು ಗಳಿಸಿದ ಅಪೂರ್ವ ಡಿ., ಬಿಎಸ್ಸಿ ವಿಭಾಗದಲ್ಲಿ 96.71 ಅಂಕ ಪಡೆದ ಚಂದನಾ ಟಿ., ಬಿಬಿಎಯಲ್ಲಿ 89.23 ಅಂಕ ಪಡೆದ ವೈಶ್ಮಾ ಎಂ.ಪಿ., ಬಿಸಿಎಯಲ್ಲಿ ಶೇಖಡಾ 87.23 ಅಂಕಗಳೊಂದಿಗೆ ಕೆ.ಹೆಚ್. ತೃಷಾ ಹಾಗೂ ಬಿಸಿಎ ಎಐ ಆಂಡ್ ಎಂಎಲ್ನಲ್ಲಿ ಕೆ. ಶೆಹೆನಾಝ್ 93.08 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿರುತ್ತಾರೆ.
‘ದ್ವಿತೀಯ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಕ್ಷಿಪ್ರಗತಿಯಲ್ಲಿ ಪ್ರಕಟಿಸುವಲ್ಲಿ ಸಹಕಾರ ನೀಡಿದ ಪ್ರತಿಯೋರ್ವರೂ ಅಭಿನಂದನಾರ್ಹರು. ಕಾಲೇಜಿನ ಸಿಬ್ಬಂದಿವರ್ಗದ ಶಿಸ್ತು ಹಾಗೂ ಸಮರ್ಪಣಾ ಮನೋಭಾವ ಪ್ರಶಂಸನೀಯ. ಮಾತ್ರವಲ್ಲದೆ ಪರೀಕ್ಷಾಂಗ ಕುಲಸಚಿವರಾದ ಡಾ. ವಿನಯಚಂದ್ರ ಮತ್ತು ಉಪಕುಲಸಚಿವರುಗಳಾದ ಜಾನ್ಸನ್ ಡೇವಿಡ್ ಸಿಕ್ವೆರಾ ಹಾಗೂ ಅಭಿಷೇಕ್ ಸುವರ್ಣ ಇವರುಗಳ ಕಾರ್ಯತತ್ಪರತೆಯಿಂದ ಈ ಸಾಧನೆಯು ಸಾಧ್ಯವಾಯಿತು. ಉತ್ತಮ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಅವರ ಈ ಸಾಧನೆಯು ಇತರರಿಗೆ ಸ್ಪೂರ್ತಿ ನೀಡಲಿ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಸಾಧಿಸುವಂತಾಗಲಿ ಎಂದು ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ತಿಳಿಸಿದರು.
‘ಜೂನ್ ತಿಂಗಳ ಮೊದಲೆರಡು ವಾರಗಳಲ್ಲಿ ದ್ವಿತೀಯ ಸೆಮಿಸ್ಟರ್ ಪದವಿ ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು. ಬಳಿಕ ದ್ವಿತೀಯ ಸೆಮಿಸ್ಟರ್ಗಳ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಯಿತು. ಇಂದು ಅಪರಾಹ್ನ ನಾಲ್ಕು ಗಂಟೆಗೆ ಅಂತಿಮ ಬ್ಯಾಚ್ಗಳ ಪ್ರಾಯೋಗಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಯಿತು. ನಂತರದ ಒಂದು ಗಂಟೆಯೊಳಗಾಗಿ ಫಲಿತಾಂಶವನ್ನು ಪ್ರಕಟಪಡಿಸಲಾಯಿತು. ದಾಖಲೆಯ ವೇಗದಲ್ಲಿ ಫಲಿತಾಂಶ ಪ್ರಕಟಿಸಿರುವುದು ಸಂತಸದ ವಿಚಾರವಾಗಿದೆ. ಉತ್ತರ ಪತ್ರಿಕೆಗಳನ್ನು ಕ್ಲಪ್ತ ಸಮಯದಲ್ಲಿ ಕೋಡಿಂಗ್ ಹಾಗೂ ಮೌಲ್ಯ ಮಾಪನ ಪ್ರಕ್ರಿಯೆಗೆ ಸಹಕಾರ ನೀಡಿದ ಪ್ರತಿಯೋರ್ವರಿಗೂ ಅಭಿನಂದನೆಗಳು. ಮಾರ್ಗದರ್ಶನ ನೀಡಿದ ಪ್ರಾಂಶುಪಾಲರು ಹಾಗೂ ಕಾಲೇಜಿನ ಸಂಚಾಲಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಕುಲಸಚಿವರಾದ ಡಾ. ವಿನಯಚಂದ್ರ ತಿಳಿಸಿದ್ದಾರೆ.