ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ-ಎನ್‌ಐಎಗೆ ನೀಡಲು ನಮ್ಮ ಅಭ್ಯಂತರ ಇಲ್ಲ: ದಿನೇಶ್ ಗುಂಡೂರಾವ್

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ-ಎನ್‌ಐಎಗೆ ನೀಡಲು ನಮ್ಮ ಅಭ್ಯಂತರ ಇಲ್ಲ: ದಿನೇಶ್ ಗುಂಡೂರಾವ್


ಪುತ್ತೂರು: ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ನಮ್ಮ ಪೊಲೀಸರು ಸೂಕ್ತ ತನಿಖೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಿದ್ದಾರೆ. ಈ ಘಟನೆಯ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುವುದನ್ನೂ ತನಿಖೆ ಮಾಡಿದ್ದಾರೆ. ಆದರೆ ಬಿಜೆಪಿಯವರಿಗೆ ಎನ್‌ಐಎ ಕೊಡಲು ಮನಸ್ಸಿದೆ. ಅವರು ಯಾರಿಗೆ ಬೇಕಾದರೂ ಕೊಡಲಿ. ಅದಕ್ಕೆ ನಮ್ಮ ಯಾವುದೇ ಅಭ್ಯಂತರ ಇಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬುಧವಾರ ಪುತ್ತೂರಿಗೆ ಆಗಮಿಸಿದ ಅವರು ಮಾದ್ಯಮಗಳೊಂದಿಗೆ ಮಾತನಾಡಿ, ಎನ್‌ಐಎ ಬರುವುದಾದರೆ ಬರಲಿ. ಅವರು ಬಂದರೂ ಪೊಲೀಸರು ಮಾಡಿದ್ದನ್ನೇ ಮಾಡುತ್ತಾರೆ. ಈ ವಿಚಾರದಲ್ಲಿ ಪರಿಶೀಲನೆ ನಡೆಸುವುದಾಗಿ ಈಗಾಗಲೇ ಗೃಹಸಚಿವರು ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ಎನ್‌ಐಎ ತನಿಖೆಯೇ ಬೇಕು ಎಂದು ಹೇಳುತ್ತಿದ್ದಾರೆ. ಇದರಲ್ಲಿ ಯಾರು ತಪ್ಪು ಮಾಡಿದ್ದಾರೆ, ಯಾರು ಭಾಗಿಯಾಗಿದ್ದಾರೆ ಅವರು ಸಿಕ್ಕಿಹಾಕಿಕೊಳ್ಳಬೇಕು ಎಂಬುವುದು ನಮ್ಮ ಆಶಯ ಎಂದರು.

ರಹಿಮಾನ್ ಹತ್ಯೆಯನ್ನೂ ಎನ್‌ಐಎಗೆ ನೀಡಲಿ:

ಬಿಜೆಪಿಗರು ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಹಿಂದೂ ಸತ್ತರೆ ಮಾತ್ರ ನೋವಾಗುತ್ತದೆ. ಬೇರೆಯವರು ಸತ್ತರೆ ನೋವಾಗುವುದಿಲ್ಲ. ಅವರಿಗೆ ಮನುಷ್ಯತ್ವವೇ ಇಲ್ಲ. ಎಲ್ಲದರಲ್ಲೂ ರಾಜಕೀಯ ಮಾಡುವುದೇ ಅವರ ಗುರಿ. ಆದರೆ ನಾವು ಹಾಗಲ್ಲ. ಎಲ್ಲರನ್ನೂ ಒಂದೇ ತರ ನೋಡುತ್ತೇವೆ. ಅಬ್ದುಲ್ ರಹಮಾನ್ ಹತ್ಯೆಯನ್ನೂ ಎನ್‌ಐಎಗೆ ಕೊಡಲಿ. ಅವರೇ ತನಿಖೆ ನಡೆಸಲಿ. ರೆಹಮಾನ್ ಹತ್ಯೆ ಹಿಂದೆ ಇರುವವರ ವಿಚಾರವೂ ನಮಗೆ ಗೊತ್ತಾಗಿದೆ. ಈ ವಿಚಾರದಲ್ಲಿ ಯಾವ ಅಭ್ಯಂತರವೂ ನಮಗಿಲ್ಲ ಎಂದವರು ಹೇಳಿದರು. 

ಅಕ್ರಮ ಮರಳುಗಾರಿಗೆ ಸಾಥ್ ಇಲ್ಲ:

ದಕ ಜಿಲ್ಲೆಯಲ್ಲಿ ಕೆಂಪುಕಲ್ಲು ಮತ್ತು ಮರಳುಗಾರಿಕೆ ಸ್ಥಗಿತಗೊಂಡ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಕ್ರಮಕೈಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅಕ್ರಮ ವಿಚಾರಗಳಿಗೆ ನಾವು ಸಾಥ್ ನೀಡುವುದಿಲ್ಲ. ಅಕ್ರಮಕ್ಕೆ ನಮ್ಮ ಪ್ರೋತ್ಸಾಹ ಇಲ್ಲ. ಇದಕ್ಕೆ ಅನುಮತಿಯನ್ನೂ ಕೊಡುವುದಿಲ್ಲ. ಹಾಗಾಗಿ ಈ ಕೆಂಪುಕಲ್ಲು ಗಣಿಗಾರಿಕೆ ಮತ್ತು ಮರಳುಗಾರಿಕೆಯನ್ನು ಕಾನೂನಿನ ಚೌಕಟ್ಟಿನಲ್ಲಿ ತರಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು. 

ಈ ವಿಚಾರಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಕೆಲವೊಂದು ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಈಗಾಗಲೇ ಪರಿಹಾರ ವಿತರಣೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದ್ದಾರೆ. ಪರಿಹಾರ ನೀಡಲು ಸರ್ಕಾರಕ್ಕೆ ಹಣದ ಕೊರತೆ ಇಲ್ಲ. ಎಷ್ಟು ಹಣ ಬೇಕಾದರೂ ನೀಡಲು ಸರ್ಕಾರ ಬದ್ಧವಾಗಿದೆ. ಒಂದು ವೇಳೆ ಪರಿಹಾರ ಸಿಗದೇ ಇರುವ ವಿಚಾರ ಇದ್ದರೆ ಚರ್ಚೆ ನಡೆಸಿದ ಬಳಿಕ ಪರಿಹಾರ ನೀಡಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article