
ನೀಟ್ ಪರೀಕ್ಷೆಯಲ್ಲಿ ಸಾಧನೆ: ನಿಖಿಲ್ ಸೊನ್ನದ್‌ಗೆ ಸನ್ಮಾನ
Wednesday, June 18, 2025
ಮಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ ಆಡಳಿತ ಕಚೇರಿ, ಮಂಗಳೂರು ವತಿಯಿಂದ ಈ ವರ್ಷದ ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿ ನಿಖಿಲ್ ಸೊನ್ನದ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪ ಮಹಾ ಪ್ರಬಂಧಕ ಕೃಷ್ಣ ಮೋಹನ್ ಮುಚರ್ಲಾ ಅವರು ನಿಖಿಲ್ ಅವರ ಸಾಧನೆಯು ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪೋಷಕರಿಗೆ ಪ್ರೇರಣೆಯಾಗಿದೆ. ನಿಖಿಲ್ ಅವರ ಇಚ್ಛೆಯಂತೆ ಅವರು ವೈದ್ಯಕೀಯ ಕ್ಷೇತ್ರದಲ್ಲಿಯೂ ಅತ್ಯುನ್ನತ ಸಾಧನೆಯನ್ನು ಮಾಡುವಂತಾಗಲಿ ಎಂದು ಹಾರೈಸಿದರು.
ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕಿ ಲತಾ ಎಂ. ಅವರು ಮಾತನಾಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಬಗ್ಗೆ ಬ್ಯಾಂಕಿಗೆ ಇರುವ ಬದ್ಧತೆಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಶೈಕ್ಷಣಿಕ ಸಾಲದ ತಾತ್ವಿಕ ಅನುಮೋದನೆ ಪ್ರತಿಯನ್ನು ನಿಖಿಲ್ ಅವರಿಗೆ ಹಸ್ತಾಂತರಿಸಲಾಯಿತು.
ಸಮಾರಂಭದಲ್ಲಿ ಬ್ಯಾಂಕ್‌ನ ಮಾನವ ಸಂಪನ್ಮೂಲ ಮುಖ್ಯ ಅಧಿಕಾರಿ ವೆಂಕಟೇಶ್ ಮೆನ್ನಿ ಮತ್ತು ಮಂಗಳೂರು ಶಾಖೆಯ ಮುಖ್ಯ ವ್ಯವಸ್ಥಾಪಕ ರಜತ್ ಶೆಟ್ಟಿ, ವಿದ್ಯಾರ್ಥಿಯ ಪಾಲಕರಾದ ಡಾ. ಸಿದ್ದಪ್ಪ ಸೋನ್ನದ್, ಡಾ. ಮೀನಾಕ್ಷಿ ಮತ್ತು ಬ್ಯಾಂಕ್‌ನ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶ್ವೇತಾ ಕನ್ನತ್ ಕಾರ್ಯಕ್ರಮ ನಿರೂಪಿಸಿದರು.