
ಹೊಸಬಾಳೆ ಹೇಳಿಕೆ ದೇಶದ್ರೋಹ: ಹರೀಶ್‌ಕುಮಾರ್
ಪುತ್ತೂರು: ಸಂವಿಧಾನದಲ್ಲಿರುವ ಸಮಾಜವಾದ ಪದವನ್ನು ತೆಗೆಯುವಂತೆ ಆರ್‌ಎಸ್‌ಎಸ್‌ನ ಹೊಸಬಾಳೆ ನೀಡಿರುವುದು ದೇಶದ್ರೋಹದ ಹೇಳಿಕೆಯಾಗಿದೆ. ಇದನ್ನು ಮಾಡಲು ಮುಂದಾದರೆ ದೇಶದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ನುಡಿದಂತೆ ನಡೆಯುವ ಕಾಂಗ್ರೇಸ್ ನವರು ಗಾಂಧೀ ಅನುಯಾಯಿಗಳು. ಆದರೆ ಸುಳ್ಳಿನಲ್ಲಿಯೇ ಬದುಕುವ ಬಿಜೆಪಿಗರು ಗೋಡ್ಸೆ ಅನುಯಾಯಿಗಳು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್ ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಶನಿವಾರ ಸಂಜೆ ಪುತ್ತೂರು ಬಸ್‌ನಿಲ್ದಾಣದ ಗಾಂಧಿಕಟ್ಟೆಯ ಗಾಂಧೀ ಪುತ್ಥಳಿಗೆ ಹಾರಾರ್ಪಣೆ ಮಾಡುವ ಮೂಲಕ ‘ಬಿಜೆಪಿ ಸುಳ್ಳಿಗೆ ಕಾಂಗ್ರೇಸ್ ಉತ್ತರ’ ಅಭಿಯಾನಲ್ಲೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾವು ಹೇಮನಾಥ ಶೆಟ್ಟಿ ಅವರು ಮಾತನಾಡಿ, ಉಚಿತ ಬಸ್ ಪಯಣವನ್ನು ವಿರೋಧಿಸುವ ಬಿಜೆಪಿಗರು ಅದೇ ಉಚಿತ ಬಸ್‌ನಲ್ಲಿ ಬಂದು ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿ ನಡೆಸಲಾದ ಬಿಜೆಪಿ ಪ್ರತಿಭಟನೆ ಹಾಸ್ಯಾಸ್ಪದವಾಗಿದೆ. ಅವರು ನಡೆಸಿದ ಪ್ರತಿಭಟನೆಯಲ್ಲಿ ಜನರೇ ಭಾಗವಹಿಸಲಿಲ್ಲ. ಸಮರ್ಥನೆ ಮಾಡಲು ಅವರಲ್ಲಿ ಶಕ್ತಿ ಇಲ್ಲ. ಅಭಿವೃದ್ಧಿಯಿಂದ ಗೆಲ್ಲಲಾರದ ಬಿಜೆಪಿಗರು ಧರ್ಮಾಧಾರಿತವಾಗಿ ಜನರನ್ನು ವಿಭಜಿಸಿ ಗೆಲ್ಲುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಕೇಂದ್ರ ಸರ್ಕಾರದ ಮೂಲಕ ಜನರಿಗೆ ಉಚಿತ ರೈಲು ವ್ಯವಸ್ತೆ ಮಾಡಲಿ ಎಂದು ಸವಾಲು ಹಾಕಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ, ಗ್ರಾಪಂಗಳ 14ನೇ ಹಣಕಾಸು ಅನುದಾನದ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ನೈತಿಕತೆಯೇ ಇಲ್ಲ. ಪ್ರಧಾನಿ ಮನಮೋಹನ್ ಸಿಂಗ್ ಅತೀ ಹೆಚ್ಚು ಅನುದಾನ ನೀಡಿದ್ದರು. ಆದರೆ ಈಗಿನ ಕೇಂದ್ರ ಸರ್ಕಾರ ಅನುದಾನ ಕಡಿತ ಮಾಡಿ ಗ್ರಾಪಂಗಳಿಗೆ ಶಕ್ತಿಯೇ ಇಲ್ಲದಂತೆ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಲ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಕೋಶಾಧಿಕಾರಿ ವಲೇರಿಯನ್ ಡಯಾಸ್, ಎಸ್ಸಿ ಘಟಕದ ಅಧ್ಯಕ್ಷ ಬಾಬು ಮರಿಕೆ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮೋನಪ್ಪ ಪೂಜಾರಿ ಕೆರೆಮಾರು, ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಯುವ ಕಾಂಗ್ರೆಸ್ ಅಧ್ಯಕ್ಷ ಅಖಿಲ್ ಕಲ್ಲಾರೆ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಸಾಮಾಜಿಕ ಜಾಲತಾಣದ ಸುಪ್ರೀತ್ ಕಣ್ಣಾರಾಯ, ಮಾಜಿ ಡಿಸಿಸಿ ಸದಸ್ಯ ಚಂದ್ರಹಾಸ ರೈ ಬೋಳೋಡಿ ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್ ಸೇವಾ ದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ’ಸೋಜ ವಂದೇ ಮಾತರಂ ಹಾಡಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ, ಚಂದ್ರಪ್ರಭಾ ಗೌಡ ವಂದಿಸಿದರು. ಉಪಾಧ್ಯಕ್ಷ ಮೌರೀಸ್ ಕುಟಿನ್ಹಾ ಕಾರ್ಯಕ್ರಮ ನಿರೂಪಿಸಿದರು.