ಕಟ್ಟಡ ನಿರ್ಮಾಣ ನಿಯಮಗಳ ಸರಳೀಕರಣಕ್ಕೆ ಚಿಂತನೆ: ದಿನೇಶ್ ಗುಂಡೂರಾವ್

ಕಟ್ಟಡ ನಿರ್ಮಾಣ ನಿಯಮಗಳ ಸರಳೀಕರಣಕ್ಕೆ ಚಿಂತನೆ: ದಿನೇಶ್ ಗುಂಡೂರಾವ್


ಸುಳ್ಯ: ಮನೆ ನಿರ್ಮಾಣ ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನಿಯಮಗಳನ್ನು ಸರಳೀಕರಿಸುವ ಬಗೆ ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅವರು ಬುಧವಾರ ಸುಳ್ಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು. 

ನಿವೇಶನಗಳ ನೋಂದಣಿ, ನಕ್ಷೆ ಮಂಜೂರಾತಿ, ಖಾತೆ, 9/11, ಏಕ ನಿವೇಶನ ಸೇರಿದಂತೆ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಹಲವಾರು ನಿಯಮಗಳನ್ನು ಪಾಲಿಸಬೇಕಿರುವುದರಿಂದ ಸಾರ್ವಜನಿಕರಿಗೆ ಮನೆ ನಿರ್ಮಿಸಲು ವಿಳಂಬವಾಗುತ್ತಿರುವ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಹಲವಾರು ಅಹವಾಲುಗಳು ಬಂದಿದೆ. ಯಾವುದೇ ನಗರವನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲು ನಗರ ಯೋಜನಾ ಪ್ರಾಧಿಕಾರ ಅಗತ್ಯವಾಗಿದೆ. ಆದರೂ ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದೆಂದು ಸರಕಾರದ ಕಾಳಜಿಯಾಗಿದೆ. ಈ ನಿಟ್ಟಿನಲ್ಲಿ ನಿಯಮಗಳನ್ನು ಸರಳೀಕರಿಸಿ ತ್ವರಿತವಾಗಿ ಇಂತಹ ಮಂಜೂರಾತಿ ನೀಡುವ ಬಗ್ಗೆ ಸರಕಾರ ಗಮನ ಹರಿಸಲಿದೆ ಎಂದು ಅವರು ತಿಳಿಸಿದರು. 

ನಿವೇಶನ ಮಂಜೂರಾತಿ ಸಂದರ್ಭದಲ್ಲಿ ಕಂದಾಯ ಮತ್ತು ಅರಣ್ಯ ಭೂಮಿಯ ಬಗ್ಗೆ ತಕರಾರು ಉದ್ಭವಿಸಿ ಪ್ರಕ್ರಿಯೆಗಳು ವಿಳಂಬವಾಗುತ್ತಿವೆ. ಈ ನಿಟ್ಟಿನಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಸರ್ವೆ ಕಾರ್ಯವನ್ನು ತ್ವರಿತವಾಗಿ ನಡೆಸಬೇಕೆಂದು ಅವರು ಸೂಚಿಸಿದರು. 94 ಸಿ ಪ್ರಕರಣದಲ್ಲಿ ಭೂ ಮಂಜೂರಾತಿ ಕಡತಗಳನ್ನು ಯಾವುದೇ ಸಕಾರಣಗಳಿಲ್ಲದೆ ವಿಳಂಬಿಸುವುದನ್ನು ಸರಕಾರ ಸಹಿಸುವುದಿಲ್ಲ. ಕಾಲಮಿತಿಯಲ್ಲಿ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕೆಂದು ಸಚಿವರು ಸೂಚಿಸಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ  ಮತ್ತಿತರರು ಉಪಸ್ಥಿತರಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ ವೇತನ ಮಂಜೂರಾತಿ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಿದರು. ಕಾಡಾನೆ ದಾಳಿಯಿಂದ ಸಂತ್ರಸ್ತ ರೈತರಿಗೆ ಪರಿಹಾರ ಮೊತ್ತ ಚೆಕ್ ವಿತರಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article