
ಸುಳ್ಯ ನಗರ ಸಮೀಪ ಅರಂಬೂರು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಕಾಡಾನೆಗಳ ಹಿಂಡು ಪ್ರತ್ಯಕ್ಷ…!
Saturday, June 14, 2025
ಸುಳ್ಯ: ಸುಳ್ಯ ನಗರ ಸಮೀಪ ಅರಂಬೂರಿನಲ್ಲಿ ಕಾಡಾನೆಗಳ ಹಿಂಡು ಮತ್ತೆ ಕಾಣಿಸಿಕೊಂಡಿದೆ. ಶನಿವಾರ ಸಂಜೆಯ ವೇಳೆಗೆ ಆನೆಗಳ ಹಿಂಡು ರಸ್ತೆ ದಾಟುವ ದೃಶ್ಯ ಯಾರೋ ವಾಹನ ಸವಾರರು ಸೆರೆ ಹಿಡಿದಿದ್ದು ವೀಡಿಯೋ ವೈರಲ್ ಆಗಿದೆ. ಅರಂಬೂರು ಸಮೀಪದ ಅರಣ್ಯ ಇಲಾಖೆಯ ಡಿಪ್ಪೊ ಬಳಿಯಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಿಗಳು ಸೇರಿದಂತೆ ಆನೆಗಳ ಹಿಂಡು ರಸ್ತೆ ದಾಟುತ್ತಿರುವ ದೃಶ್ಯ ಕಂಡು ಬಂದಿದೆ.
ಈ ಭಾಗದಲ್ಲಿ ಕಳೆದ ವಾರದಲ್ಲಿ ಕಾಣಿಸಿಕೊಂಡಿದ್ದ ಆನೆಗಳ ಹಿಂಡು ಕೆಲ ದಿನಗಳ ಬಳಿಕ ಗುರುವಾರ ರಾತ್ರಿ ಮತ್ತೆ ಅರಂಬೂರು ಭಾಗಕ್ಕೆ ಬಂದು ಕೃಷಿ ಹಾನಿ ಮಾಡಿತ್ತು. ಇದೀಗ ಮತ್ತೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ಪೂಮಲೆ ಕಾಡಿನಿಂದ ಆನೆಗಳ ಹಿಂಡು ರಸ್ತೆ ದಾಟುತ್ತಿರುವ ದೃಶ್ಯ ಕಂಡು ಬಂದಿದೆ.
ಅರಂಬೂರು, ಪರಿವಾರಕಾನ ಸೇರಿದಂತೆ ಆಲೆಟ್ಟಿ ಗ್ರಾಮದ ವಿವಿಧ ಭಾಗಗಳಲ್ಲಿ ಕಳೆದ ವಾರ ಹಲವು ದಿನಗಳ ಕಾಲ ಕಾಡಾನೆಗಳು ಕೃಷಿ ಹಾನಿ ಮಾಡಿದ್ದವು.