‘ಶೌರ್ಯ’: ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರಿಗೆ ಕೌಶಲಾಭಿವೃದ್ಧಿ ತರಬೇತಿ

‘ಶೌರ್ಯ’: ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರಿಗೆ ಕೌಶಲಾಭಿವೃದ್ಧಿ ತರಬೇತಿ

ಸೇವೆ ಮಾಡುವವರಿಗೆ ಸದಾ ದೇವರ ಅನುಗ್ರಹ ಇರುತ್ತದೆ: ಡಿ. ವೀರೇಂದ್ರ ಹೆಗ್ಗಡೆ


ಉಜಿರೆ: ಜಾತಿ-ಮತ ಬೇಧವಿಲ್ಲದೆ ನಿಸ್ವಾರ್ಥ ಮನೋಭಾವದಿಂದ ಮಾನವೀಯತೆಯೊಂದಿಗೆ ‘ಶೌರ್ಯ’ ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರು ಮಾಡುವ ಸೇವೆ ಅದ್ಭುತವಾಗಿದ್ದು, ಹೆಚ್ಚಿನ ಸಂತೋಷ ಮತ್ತು ಅಭಿಮಾನ ಉಂಟು ಮಾಡಿದೆ. ಸೇವೆ ಮಾಡುವವರಿಗೆ ಸದಾ ದೇವರ ಅನುಗ್ರಹ ಇರುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಬೆಳ್ತಂಗಡಿ ಮತ್ತು ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ‘ಶೌರ್ಯ’ ವಿಪತ್ತು ನಿರ್ವಹಣಾ ತಂಡದ 330 ಸದಸ್ಯರಿಗೆ ಆಯೋಜಿಸಿದ ತುರ್ತು ಸ್ಪಂದನೆ ಮತ್ತು ಕೌಶಲಾಭಿವೃದ್ಧಿ ತರಬೇತಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬದುಕಿನಲ್ಲಿ ಏನೇ ಆಪತ್ತು, ವಿಪತ್ತು ಬಂದರೂ ಧೈರ್ಯ ಮತ್ತು ಆತ್ಮವಿಶ್ವಾಸದೊಂದಿಗೆ ಬದುಕು ಕಟ್ಟಿಕೊಳ್ಳಬೇಕು. ಇದಕ್ಕೆ ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ‘ಶೌರ್ಯ’ ಘಟಕದ ಸ್ವಯಂ-ಸೇವಕರು ಆಪತ್ಕಾಲದ ಆಪದ್ಬಾಂಧವರಾಗಿ ಸಕಾಲಿಕ ನೆರವು, ರಕ್ಷಣೆ ನೀಡುತ್ತಾರೆ. ಅವರು ಕೂಡಾ ತಮ್ಮ ರಕ್ಷಣೆಯನ್ನು ಮೊದಲು ತಾವು ಮಾಡಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಆಪತ್ತು, ಆತಂಕದಲ್ಲಿದ್ದವರ ಸೇವೆ ದೇವರ ಪೂಜೆ, ಸೇವೆಯಷ್ಟೇ ಪವಿತ್ರ ಹಾಗೂ ಪುಣ್ಯದ ಕಾಯಕವಾಗಿದೆ ಎಂದರು.

ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಆಂಧ್ರಪ್ರದೇಶದ ಗುಂಟೂರು ಎನ್.ಡಿ.ಆರ್.ಎಫ್. ತಂಡದ ಹಿರಿಯ ಅಧಿಕಾರಿ ಶಾಂತಿಲಾಲ್ ಜಟಿಯಾ ‘ಶೌರ್ಯ’ ಸ್ವಯಂ ಸೇವಕರ ಸೇವೆಯನ್ನು ಶ್ಲಾಘಿಸಿ ಇಂತಹ ಘಟಕಗಳು ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಪ್ರಾರಂಭವಾಗಬೇಕು. ಸಂಘಟನೆಯೇ ಶಕ್ತಿಯಾಗಿದ್ದು, ಒಗ್ಗಟ್ಟಿನಿಂದ ಎಲ್ಲರೂ ಸೇವೆ ಮಾಡಿದರೆ ಉನ್ನತ ಸಾಧನೆ ಸಾಧ್ಯವಾಗುತ್ತದೆ. ಇದಕ್ಕೆ ಸರ್ಕಾರದ ಮಾನ್ಯತೆಯೂ ದೊರಕಿರುವುದು ಸ್ತುತ್ಯಾರ್ಹವಾಗಿದೆ ಎಂದು ಹೇಳಿ ಅವರು ಶುಭ ಹಾರೈಸಿದರು.

ಸ್ವಯಂ-ಸೇವಕರ ಪರವಾಗಿ ಅವಿನಾಶ್ ಮತ್ತು ನಡ ಗ್ರಾಮದ ಸಂಯೋಜಕಿ ಕುಮಾರಿ ವಸಂತಿ ಅನುಭವ, ಅನಿಸಿಕೆ ವ್ಯಕ್ತಪಡಿದರು.

ಸಾಧಕರ ಸನ್ಮಾನ:

ಉತ್ತಮ ಸೇವೆ-ಸಾಧನೆ ಮಾಡಿದ ಸ್ವಯಂ-ಸೇವಕರಾದ ಉಜಿರೆಯ ರವೀಂದ್ರ, ಅರಸಿನಮಕ್ಕಿಯ ಅವಿನಾಶ್, ನಾರಾವಿಯ ದಿನೇಶ್ ಶೆಟ್ಟಿ ಮತ್ತು ತೆಂಕಕಾರಂದೂರು ಗ್ರಾಮದ ಸವಿತಾ ಪಿರೇರಾ ಅವರನ್ನು ಅಭಿನಂದಿಸಲಾಯಿತು.

ಉತ್ತಮ ಸಾಧಕ ಘಟಕ ಪ್ರಶಸ್ತಿ:

ಶಿಶಿಲ-ಅರಸಿನಮಕ್ಕಿ ಘಟಕ ಮತ್ತು ಮಡಂತ್ಯಾರ್ ಘಟಕಗಳಿಗೆ ಉತ್ತಮ ಸಾಧಕ ಘಟಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಕ್ಷಿಣಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ನಿರ್ವಹಣಾ ಅಧಿಕಾರಿ ವಿಜಯ್ ಪೂಜಾರ್ ಉಪಸ್ಥಿತರಿದ್ದು, ಶುಭ ಹಾರೈಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಆಶಯನುಡಿಗಳನ್ನಾಡಿ ‘ಶೌರ್ಯ’ ತಂಡ 5 ವರ್ಷಗಳ ಸಾರ್ಥಕ ಸೇವೆ ಪೂರೈಸಿದ್ದು ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ ಎಂದರು.

ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಸ್, ರಾಜ್ಯದ 91 ತಾಲ್ಲೂಕುಗಳಲ್ಲಿ 10,460 ಸ್ವಯಂ ಸೇವಕರು ಸೇವಾ ಕಾಯಕದಲ್ಲಿ ನಿರತರಾಗಿದ್ದಾರೆ ಎಂದರು.

ಯೋಜನಾಧಿಕಾರಿ ಅಶೋಕ, ಬಿ. ವಂದಿಸಿದರು. ಯೋಜನಾಧಿಕಾರಿ ಗಣೇಶ್ ಕಾರ್ಯಕ್ರಮ ನಿರ್ವಹಿಸಿದರು. ಶಾಂತಿಲಾಲ್ ಜಟಿಯಾ, ವಿನೋದ್ ಜಿ. ಮತ್ತು ಅಧಿಕಾರಿಗಳು ವಿಪತ್ತು ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article