
ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಜಿಲ್ಲಾ ಪರಿಷತ್ ಸದಸ್ಯ ಐ. ಕುಂಞಿಪಳ್ಳಿ ನಿಧನ
ಸುಳ್ಯ: ಹಿರಿಯ ಕಾಂಗ್ರೆಸ್ ಮುಖಂಡ, ಜಿಲ್ಲಾ ಪರಿಷತ್ ಮಾಜಿ ಸದಸ್ಯ, ನೋಟರಿ ವಕೀಲರಾದ ಐ.ಕುಂಞಿಪಳ್ಳಿ (87) ಅವರು ಜೂ.27ರಂದು ಸುಳ್ಯ ಪೈಚಾರಿನ ಅವರ ಮನೆಯಲ್ಲಿ ನಿಧನರಾದರು.
ವಕೀಲರಾಗಿ ನೋಟರಿಯಾಗಿ, ರಾಜಕಾರಿಣಿಯಾಗಿ, ಜನಪ್ರತಿನಿಧಿಯಾಗಿದ್ದ ಕುಂಞಿಪಳ್ಳಿಯವರು ಕೇನ್ಯ ಗ್ರಾಮದ ಐವತ್ತೊಕ್ಲು ಮನೆಯ ಪ್ರಗತಿಪರ ಕೃಷಿಕ ದಿ. ಹಾಜಿ ಮಮ್ಮಾಲಿ ಪಟೇಲ್ ಹಾಗೂ ಉಮ್ಮಾಲಮ್ಮ ದಂಪತಿಗಳ ಪುತ್ರರಾಗಿ 1938ರಲ್ಲಿ ಜನಿಸಿದರು. ಮಂಗಳೂರಿನಲ್ಲಿ, ಪುತ್ತೂರಿನಲ್ಲಿ, ಸುಳ್ಯದಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು. ಸುಳ್ಯ ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ದ.ಕ. ಜಿಲ್ಲಾ ಪರಿಷತ್ ಸುಳ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹಾಗೂ ಜನತಾ ಪಕ್ಷದ ಅಭ್ಯರ್ಥಿ ಎಂ.ಬಿ. ಸದಾಶಿವ ಅವರ ವಿರುದ್ಧ ಗೆಲುವು ಸಾಧಿಸಿದ್ದರು.
ದ.ಕ. ಜಿಲ್ಲಾ ಪರಿಷತ್‌ನ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ದ.ಕ. ಜಿಲ್ಲಾ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಉಪಾಧ್ಯಕ್ಷರಾಗಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಎಣ್ಮೂರು ಜುಮ್ಮಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸುಳ್ಯ ತಾಲೂಕು ಸಂಯುಕ್ತ ಜಮಾ ಅತಿನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.